ADVERTISEMENT

ಕೆನಾಡಾ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ನಲ್ಲಿ ಪ್ರಿಯಾಂಶು ರಾಜಾವತ್‌ಗೆ ಸೋಲು

ಕೆನಾಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 7 ಜುಲೈ 2024, 13:51 IST
Last Updated 7 ಜುಲೈ 2024, 13:51 IST
ಪ್ರಿಯಾಂಶು ರಾಜಾವತ್‌
ಪ್ರಿಯಾಂಶು ರಾಜಾವತ್‌   

ಕ್ಯಾಲ್ಗರಿ: ಕೆನಡಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಪ್ರಿಯಾಂಶು ರಾಜಾವತ್‌ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಅಲೆಕ್ಸ್‌ ಲೆನಿಯರ್‌ ವಿರುದ್ಧ ಸೋಲನುಭವಿಸಿದ್ದಾರೆ.  

ಇಲ್ಲಿನ ಮಾರ್ಕಿನ್ ಮೆಕ್‌ಫಿಲ್‌ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ರಾಜಾವತ್‌, 17-21, 10-21ರಿಂದ ಲೆನಿಯರ್‌ ವಿರುದ್ಧ ಪರಾಭವಗೊಂಡರು. ಈ ಪಂದ್ಯವು 45 ನಿಮಿಷಗಳ ಕಾಲ ನಡೆಯಿತು. 

ರಾಜಾವತ್‌ ಅವರು ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಟೂರ್ನಿ ಅರ್ಹತಾ ಸುತ್ತಿನಲ್ಲಿ ಲೆನಿಯರ್ ಅವರನ್ನು ಸೋಲಿಸಿದ್ದರು. ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಪಡೆದ ರಾಜಾವತ್‌ 3–0 ಮುನ್ನಡೆಯಲ್ಲಿದ್ದರು. ಬಿರುಸಿನ ಆಟವಾಡಿದ ಲೆನಿಯರ್‌ 7–4 ರಿಂದ ಮುನ್ನಡೆ ಸಾಧಿಸಿದರು.   

ADVERTISEMENT

ಗೇಮ್‌ನಲ್ಲಿ ಕೆಲವು ಬಾರಿ ಮೇಲುಗೈ ಸಾಧಿಸಿದ್ದ ರಾಜಾವತ್‌, ಎದುರಾಳಿ ಮೇಲೆ ನಿರಂತರವಾಗಿ ಒತ್ತಡ ಹೇರುವಲ್ಲಿ ವಿಫಲರಾದರು. ಲೆನಿಯರ್‌ ಅಂತಿಮವಾಗಿ ಐದು ನೇರ ಅಂಕ ಗಳಿಸಿ ಗೇಮ್‌ ತಮ್ಮದಾಗಿಸಿಕೊಂಡರು. 

ಎರಡನೇ ಗೇಮ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಲೆನಿಯರ್‌ 8–2 ಮತ್ತು 14–3ರಿಂದ ಮುನ್ನಡೆ ಸಾಧಿಸಿದರು. ರಾಜಾವತ್‌ 10 ಅಂಕ ಗಳಿಸಿದ್ದಾಗ ಜಯದ ದಡ ಸೇರಿದ ಫ್ರೆಂಚ್‌ ಆಟಗಾರ, ಭಾರತದ ಆಟಗಾರನಿಗೆ ಫೈನಲ್‌ ಬಾಗಿಲನ್ನು ಮುಚ್ಚಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.