ADVERTISEMENT

ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಫೈನಲ್‌ಗೆ ಪ್ರಿಯಾಂಶು ರಾಜಾವತ್‌

ಪಿಟಿಐ
Published 6 ಜುಲೈ 2024, 13:30 IST
Last Updated 6 ಜುಲೈ 2024, 13:30 IST
ಪ್ರಿಯಾಂಶು ರಾಜಾವತ್‌  –ಎಎಫ್‌ಪಿ ಚಿತ್ರ
ಪ್ರಿಯಾಂಶು ರಾಜಾವತ್‌  –ಎಎಫ್‌ಪಿ ಚಿತ್ರ   

ಕ್ಯಾಲ್ಗರಿ, (ಕೆನಡಾ): ಭಾರತದ ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್‌ ವಿಶ್ವ ನಂ.4ನೇ ಕ್ರಮಾಂಕದ ಆ್ಯಂಡರ್ಸ್‌ ಆಂಟೋನ್ಸನ್‌ಗೆ ಆಘಾತ ನೀಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರಾಜಾವತ್‌ 21-11, 17-21, 21-19 ರಿಂದ ಆಂಟೋನ್ಸನ್‌ ವಿರುದ್ಧ ಜಯ ಗಳಿಸಿದರು. ಈ ಪಂದ್ಯವು 1 ಗಂಟೆ 19 ನಿಮಿಷ ನಡೆಯಿತು. 

ರಾಜಾವತ್‌ ಅವರು ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಅಲೆಕ್ಸ್‌ ಲೆನಿಯರ್‌ ಅವರನ್ನು ಎದುರಿಸಲಿದ್ದಾರೆ. ರಾಜಾವತ್‌ಗೆ ಇದು ವಿಶ್ವದ ಅಗ್ರ 10 ಕ್ರಮಾಂಕದಲ್ಲಿರುವ ಆಟಗಾರನ ವಿರುದ್ಧದ ಮೊದಲ ಗೆಲುವಾಗಿದೆ.  

ADVERTISEMENT

ಆಂಟೋನ್ಸನ್‌ ಮೊದಲ ಗೇಮ್‌ನಲ್ಲಿ 9–9 ರಿಂದ ಸಮಬಲ ಸಾಧಿಸುವ ಮುನ್ನ ಉತ್ತಮ ಆರಂಭ ಪಡೆದಿದ್ದ ರಾಜಾವತ್‌ 7–4ರ ಮುನ್ನಡೆಯಲ್ಲಿದ್ದರು. ನಂತರ ಐದು ಅಂಕ ಗಳಿಸುವ ಮೂಲಕ ರಾಜಾವತ್‌ ಮೇಲುಗೈ ಸಾಧಿಸಿದರು. ಎದುರಾಳಿ ಆಟಗಾರ ಮತ್ತೆ ಮುನ್ನಡೆ ಸಾಧಿಸಲು ಪ್ರಯತ್ನಿಸಿದರೂ ಸತತ 7 ಅಂಕ ಗಳಿಸಿದ ರಾಜಾವತ್‌, ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

ಮೊದಲ ಗೇಮ್‌ ಕಳೆದುಕೊಂಡ ಆಂಟೋನ್ಸನ್‌ ಎರಡನೇಯದ್ದರಲ್ಲಿ ಉತ್ತಮ ಆಟವಾಡಿ ಸಮಬಲ ಸಾಧಿಸಿದರು. 17–17ರ ಸಮಬಲದ ಹೋರಾಟ ನಡೆಯುತ್ತಿದ್ದಾಗ ನಾಲ್ಕು ನೇರ ಅಂಕಗಳನ್ನು ಬಿಟ್ಟಕೊಟ್ಟ ರಾಜಾವತ್‌ ಎರಡನೇ ಗೇಮ್‌ ಕೈಚೆಲ್ಲಿದರು.

ಅಂತಿಮ ಗೇಮ್‌ನಲ್ಲಿ ರಾಜಾವತ್‌ 5–1ರ ಮುನ್ನಡೆ ಸಾಧಿಸಿದರೂ ಸತತ ಆರು ಅಂಕ ಗಳಿಸಿದ ಆಂಟೋನ್ಸನ್‌ 7–5ರಿಂದ ಮುನ್ನಡೆ ಸಾಧಿಸಿದರು.

ಮೂರು ಅಂಕ ಗಳಿಸುವ ಮೂಲಕ ಪುನರಾಗಮನ ಮಾಡಿದರೂ ಅನುಭವಿ ಡೆನ್ಮಾರ್ಕ ಆಟಗಾರ ವಿರಾಮದ ಹೊತ್ತಿಗೆ 11–10 ರಿಂದ ಮುನ್ನಡೆ ಸಾಧಿಸಿದರು. 19–19ರಿಂದ ಸಮಬಲದ ಸೆಣಸಾಟ ನಡೆಯುತ್ತಿದ್ದಾಗ ಸತತ ಅಂಕ ಗಳಿಸಿದ ಪ್ರಿಯಾಂಶು ರಾಜಾವತ್‌ ಜಯ ಸಾಧಿಸಿದರು.

ಉನ್ನತ ಕ್ರಮಾಂಕದ ಆಟಗಾರರ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪಿರುವ ರಾಜಾವತ್‌, ವಿಶ್ವ ನಂ.24 ಡೆನ್ಮಾರ್ಕ್‌ನ ರಾಸ್ಮಸ್‌ ಜೆಮ್ಕೆ ಹಾಗೂ ವಿಶ್ವ ನಂ.33ನೇ ಕ್ರಮಾಂಕದ ಜಪಾನ್‌ನ ಟಕುಮಾ ಒಬಯಾಸಿ ಅವರನ್ನು ಕ್ರಮವಾಗಿ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಸೋಲಿಸಿದ್ದರು.

ಟ್ರೀಸಾ–ಗಾಯತ್ರಿ ನಿರ್ಗಮನ:

ಮಹಿಳಾ ಡಬಲ್ಸ್‌ ಜೋಡಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಟ್ರೀಸಾ–ಗಾಯತ್ರಿ ಜೋಡಿ 18-21 21-19 16-21 ರಿಂದ ಚೈನಾ ತೈಪೆಯ ಪೀ ಶಾನ್ ಸೀ ಮತ್ತು ಎನ್ ಜೂ ಹಂಗ್ ಜೋಡಿ ವಿರುದ್ಧ ಪರಾಭವಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.