ಕುದೂರು: ತಮಿಳುನಾಡಿನ ದಿಂಡಿಗಲ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದ ಅಂತರ ವಿಶ್ವವಿದ್ಯಾಲಯದ ರಾಷ್ಟ್ರಮಟ್ಟದ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನ ಸೆಳೆದ ಭೂಮಿಕಾ ಕೆ.ಎಸ್ ಅಪ್ಪಟ ಗ್ರಾಮೀಣ ಪ್ರತಿಭೆ.
ಹೋಬಳಿಯ ಕಾಗಿಮಡು ಗ್ರಾಮದ ಭೂಮಿಕಾ ಕೆ.ಎಸ್, ಪ್ರಸ್ತುತ ಕುದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಟಿ. ದಾಸರಹಳ್ಳಿಯಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಇದಲ್ಲದೆ ಪ್ರೌಢಶಾಲಾ ಹಂತದಲ್ಲಿ ಹೋಬಳಿ ಹಾಗೂ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ತಂದೆ ಶಿವಗಂಗಯ್ಯ, ತಾಯಿ ಶಾರದಮ್ಮ ವೃತ್ತಿಯಲ್ಲಿ ರೈತರು. ಪ್ರೌಢಶಾಲಾ ಹಂತದಲ್ಲೇ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಆಸಕ್ತಿ ಹೊಂದಲು ಕಾಗಿಮುಡು ಸರ್ಕಾರಿ ಪ್ರೌಢಶಾಲೆಯ ಕ್ರೀಡಾ ಶಿಕ್ಷಕ ನವೀನ್ ಕುಮಾರ್ ಪ್ರೇರೇಪಿಸಿದರು. ಮುಂದೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗುರುಮೂರ್ತಿ ಹಾಗೂ ಕ್ರೀಡಾ ನಿರ್ದೇಶಕಿ ಕೃಷ್ಣವೇಣಿ ಪ್ರೋತ್ಸಾಹ ನೀಡಿದರು. ಮುಂದೆಯೂ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ರಾಷ್ಟ್ರಮಟ್ಟದಲ್ಲಿ ಆಟಗಾರ್ತಿಯಾಗಬೇಕೆಂಬುದು ಭೂಮಿಕಾ ಅವರ ಗುರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.