ಜಕಾರ್ತ: ರೋಚಕ ಸ್ಪರ್ಧೆಗಳ ಮೂಲಕ 15 ದಿನಗಳಿಂದ ಕ್ರೀಡಾಪ್ರಿಯರನ್ನು ರೋಮಾಂಚನಗೊಳಿಸಿದ ಏಷ್ಯನ್ ಕ್ರೀಡಾಕೂಟ ಭಾನುವಾರ ಮುಕ್ತಾಯಗೊಳ್ಳಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಭಾರತದ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಲಿದ್ದಾರೆ.
ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ನರಿಂದರ್ ಬಾತ್ರಾ ಈ ವಿಷಯವನ್ನು ತಿಳಿಸಿದ್ದಾರೆ.
ಆಗಸ್ಟ್ 18ರಂದು ನಡೆದಿದ್ದ ಉದ್ಘಾಟನಾ ಸಮಾರಂಭದಲ್ಲಿ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಭಾರತದ ಧ್ವಜಧಾರಿಯಾಗಿದ್ದರು. ಅವರು ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.
ರಾಣಿ ರಾಂಪಾಲ್ ಅವರು ಭಾರತ ಮಹಿಳೆಯರ ತಂಡವನ್ನು 20 ವರ್ಷಗಳ ನಂತರ ಮೊದಲ ಬಾರಿ ಫೈನಲ್‌ಗೆ ತಲುಪಿಸಿದ್ದರು. ಶುಕ್ರವಾರ ನಡೆದ ಫೈನಲ್‌ನಲ್ಲಿ ತಂಡವು ಜಪಾನ್‌ಗೆ 1–2ರಿಂದ ಮಣಿದಿತ್ತು.
ಭಾರತದ ಒಟ್ಟು 550 ಅಥ್ಲೀಟ್‌ಗಳ ಪೈಕಿ ಬಹುತೇಕ ಮಂದಿ ತಮ್ಮ ಸ್ಪರ್ಧೆ ಮುಗಿಸಿ ತವರಿಗೆ ಮರಳಿದ್ದಾರೆ. ಉಳಿದವರು ಭಾನುವಾರ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.