ಮೈಸೂರು: ಶಿಸ್ತಿನ ಬೌಲಿಂಗ್, ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಮೆರೆದಾಡಿದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ರಣಜಿ ಕ್ರಿಕೆಟ್ ಪಂದ್ಯದ ಮೊದಲ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ.
ಬುಧವಾರ ಎದುರಾಳಿ ತಂಡವನ್ನು ಕೇವಲ 113 ರನ್‌ಗಳಿಗೆ ಆಲೌಟ್ ಮಾಡಿದ ಆರ್.ವಿನಯ್ ಕುಮಾರ್ ಬಳಗ ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ 3 ವಿಕೆಟ್‌ಗೆ 70 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆ ಪಡೆಯಲು ಕರ್ನಾಟಕಕ್ಕೆ 44 ರನ್‌ಗಳು ಬೇಕು.
ಎದುರಾಳಿಗಳನ್ನು ತಮ್ಮ ಸ್ಪಿನ್ ಬಲೆಯಲ್ಲಿ ಕೆಡವಿದ ಜೆ.ಸುಚಿತ್ (26ಕ್ಕೆ 4) ಮತ್ತು ತಲಾ ಎರಡು ವಿಕೆಟ್ ಪಡೆದ ರೋನಿತ್ ಮೋರೆ, ವಿನಯ್ ಹಾಗೂ ಅಭಿಮನ್ಯು ಮಿಥುನ್ ಕರ್ನಾಟಕಕ್ಕೆ ಮೇಲುಗೈ ತಂದಿತ್ತರು. ಗ್ಲೇಡ್ಸ್ ಕ್ರೀಡಾಂಗಣದ ಪಿಚ್‌ನಲ್ಲಿ ಬ್ಯಾಟಿಂಗ್ ಕಷ್ಟಕರವಾಗಿದ್ದು, ಭಾರಿ ಮುನ್ನಡೆ ಪಡೆಯಬೇಕಾದರೆ ಕರ್ನಾಟಕ ಎರಡನೇ ದಿನ ಎಚ್ಚರಿಕೆಯಿಂದ ಆಡಬೇಕಿದೆ.
ಶಿಸ್ತಿನ ಬೌಲಿಂಗ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ಯಾವ ಹಂತದಲ್ಲೂ ಛಲದಿಂದ ಆಡಲಿಲ್ಲ. ವಿನಯ್ ಮೊದಲ ಓವರ್‌ನ ಐದನೇ ಎಸೆತದಲ್ಲಿ ಚಿರಾಗ್ ಖುರಾನ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಬೀಳಿಸಿ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಮುಂದಿನ ಓವರ್‌ನಲ್ಲಿ ಮಿಥುನ್ ಅವರು ಸ್ವಪ್ನಿಲ್ ಗುಗಾಲೆ ವಿಕೆಟ್ ಪಡೆದರು. ಜಯ್ ಪಾಂಡೆ ಮತ್ತು ಋತುರಾಜ್ ಗಾಯಕ್ವಾಡ್ ಮೂರನೇ ವಿಕೆಟ್‌ಗೆ 39 ರನ್ ಸೇರಿಸಿದರು.
ರೋನಿತ್ ಮೋರೆ ಸತತ ಎರಡು ಓವರ್‌ಗಳಲ್ಲಿ ಪಾಂಡೆ ಮತ್ತು ರಾಹುಲ್ ತ್ರಿಪಾಠಿ ಅವರನ್ನು ಪೆವಿಲಿಯನ್‌ಗೆ ಕಳಿಸಿ ಮಹಾರಾಷ್ಟ್ರ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಬೆಳಗ್ಗಿನ ಒಂದು ಗಂಟೆ ಅವಧಿಯಲ್ಲಿ ಪಿಚ್‌ನಲ್ಲಿ ತೇವಾಂ ಶವಿದ್ದ ಕಾರಣ ಮಧ್ಯಮ ವೇಗಿಗಳು ಅದರ ಪೂರ್ಣ ಪ್ರಯೋಜನ ಪಡೆದು ಕೊಂಡರು. ಭೋಜನ ವಿರಾಮದ ವೇಳೆಗೆ ಪ್ರವಾಸಿ ತಂಡ 5 ವಿಕೆಟ್‌ಗೆ 84 ರನ್ ಗಳಿಸಿತ್ತು. ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸುವ ಲೆಕ್ಕಾಚಾರ ಮಹಾರಾಷ್ಟ್ರ ಹಾಕಿಕೊಂಡಿತ್ತು. ಆದರೆ ಅದಕ್ಕೆ ಸುಚಿತ್ ಅವಕಾಶ ನೀಡಲಿಲ್ಲ.
ಎಚ್ಚರಿಕೆಯ ಆಟ: ಎದುರಾಳಿಗಳನ್ನು ಸಣ್ಣ ಮೊತ್ತಕ್ಕೆ ಆಲೌಟ್ ಮಾಡಿದ ಕರ್ನಾಟಕ ಅತಿಯಾದ ಎಚ್ಚರಿಕೆಯಿಂದ ಬ್ಯಾಟ್ ಮಾಡಿತು. ಈ ಪಂದ್ಯದ ಮೂಲಕ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೇವದತ್ತ ಪಡಿಕ್ಕಲ್ 7 ರನ್ ಗಳಿಸಿ ಔಟಾದರು.
ಎರಡನೇ ವಿಕೆಟ್‌ಗೆ ಜತೆಯಾದ ಡಿ.ನಿಶ್ಚಲ್ ಮತ್ತು ಕೌನೇನ್ ಅಬ್ಬಾಸ್ ನಿಧಾನವಾಗಿ ಸ್ಕೋರ್ ಹೆಚ್ಚಿಸಿದರು. ಅಬ್ಬಾಸ್ ವಿಕೆಟ್ ಪಡೆದ ರಾಹುಲ್ ತ್ರಿಪಾಠಿ ಈ ಜತೆಯಾಟ ಮುರಿದರು. ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದ ಅಬ್ಬಾಸ್ ಗಳಿಸಿದ್ದು 15 ರನ್ ಮಾತ್ರ. ಆ ಬಳಿಕ ಸಿದ್ಧಾರ್ಥ್ (11) ಅವರ ವಿಕೆಟ್ ಕಳೆದುಕೊಂಡಿತು. ನಿಶ್ಚಲ್ ಮತ್ತು ಸುಚಿತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
*
ವೇಗದ ಬೌಲರ್‌ಗಳು ಎದು ರಾಳಿಗಳಿಗೆ ಆರಂಭಿಕ ಆಘಾತ ನೀಡಿದ್ದರು. ಇದರಿಂದ ನಾನು ಒತ್ತಡವಿಲ್ಲದೆ ಬೌಲಿಂಗ್ ಮಾಡಿ ವಿಕೆಟ್‌ಗಳನ್ನು ಪಡೆದೆ.
-ಜೆ.ಸುಚಿತ್, ಕರ್ನಾಟಕ ತಂಡದ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.