ADVERTISEMENT

ರ‍್ಯಾಪಿಡ್‌ ಚೆಸ್‌: ಮುನ್ನಡೆಯಲ್ಲಿ ನಿಪೊಮ್‌ನಿಷಿ, ಅಲಿರೇಜಾ, ಲಗ್ರಾವ್‌

ಪಿಟಿಐ
Published 14 ಆಗಸ್ಟ್ 2024, 14:04 IST
Last Updated 14 ಆಗಸ್ಟ್ 2024, 14:04 IST
ಚೆಸ್‌
ಚೆಸ್‌   

ಸೇಂಟ್‌ ಲೂಯಿಸ್‌: ರಷ್ಯಾದ ಇಯಾನ್‌ ನಿಪೊಮ್‌ನಿಯಾಷಿ, ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಮತ್ತು ಮ್ಯಾಕ್ಸಿಂ ವೇಷಿಯರ್‌ ಲಗ್ರಾವ್ ಅವರು ಸೇಂಟ್‌ ಲೂಯಿ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನ ನಂತರ ತಲಾ ಎಂಟು ಪಾಯಿಂಟ್‌ಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.

ಕಣದಲ್ಲಿರುವ ಭಾರತದ ಏಕೈಕ ಆಟಗಾರ ಪ್ರಜ್ಞಾನಂದ ಆರ್‌. ಎರಡನೇ ದಿನವೂ ನಿರಾಶೆ ಅನುಭವಿಸಿದರು. ಅವರು ಹತ್ತು ಆಟಗಾರರ ಕಣದಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಮೂರು ಪಾಯಿಂಟ್ಸ್‌ ಅಷ್ಟೇ ಹೊಂದಿದ್ದಾರೆ.

ಮೊದಲ ದಿನ ಮೂರು ಸುತ್ತುಗಳ ನಂತರ ಲಗ್ರಾವ್‌ ಮುನ್ನಡೆಯಲ್ಲಿದ್ದರು. ಆದರೆ ಎರಡನೇ ದಿನವಾದ ಮಂಗಳವಾರ ನಿಪೊಮ್‌ನಿಯಾಷಿ ಮತ್ತು ಇರಾನ್‌ ಸಂಜಾತ ಅಲಿರಜಾ ಅವರು ಉತ್ತಮ ಪ್ರದರ್ಶನ ನೀಡಿದರು. ಒಂದು ಗೆದ್ದು, ಎರಡು ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡರು.

ADVERTISEMENT

ಅರ್ಮೇನಿಯಾ–ಅಮೆರಿಕನ್ ಗ್ರ್ಯಾಂಡ್‌ಮಾಸ್ಟರ್‌ ಲೆವೊನ್‌ ಅರೋನಿಯನ್‌ ಏಕಾಂಗಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಏಳು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ಮಂಗಳವಾರ ಮೂರು (4,5 ಮತ್ತು 6ನೇ) ಸುತ್ತಿನ ಪಂದ್ಯಗಳು ನಡೆದವು. ನಾಲ್ಕನೇ ಸುತ್ತಿನಲ್ಲಿ ಅಲಿರೇಜಾ, ಹಿಕಾರು ನಕಾಮುರಾ ಮೇಲೆ ಜಯಗಳಿಸಿದರು. ಉಳಿದ ನಾಲ್ಕು ಪಂದ್ಯಗಳು ‘ಡ್ರಾ’ ಆದವು. ಐದನೇ ಸುತ್ತಿನಲ್ಲಿ ನಿಪೊಮ್‌ನಿಷಿ, ಲೀನಿಯರ್‌ ಡೊಮಿಂಗೆಝ್‌ ಮೇಲೆ ಗೆಲುವನ್ನು ಪಡೆದರು. ಸುತ್ತಿನ ಇತರ ನಾಲ್ಕು ಪಂದ್ಯಗಳಲ್ಲಿ ಆಟಗಾರರು ಪಾಯಿಂಟ್ಸ್‌ ಹಂಚಿಕೊಂಡರು.

ದಿನದ ಅಂತಿಮ (ಆರನೇ) ಸುತ್ತಿನ ಪಂದ್ಯಗಳಲ್ಲಿ ಎರಡು ನಿರ್ಣಾಯಕ ಫಲಿತಾಂಶಗಳಿದ್ದವು. ಫ್ಯಾಬಿಯಾನೊ ಕರುವಾನಾ, ಪ್ರಜ್ಞಾನಂದ ಅವರನ್ನು ಸೋಲಿಸಿದರೆ, ಅಲಿರೇಜಾ ಫಿರೋಜ್ ಅವರು ಉಜ್ಬೇಕ್‌ನ ಯುವ ಆಟಗಾರ ನಾಡಿರ್ಬೆಕ್‌ ಅಬ್ದುಸತ್ತಾರೊವ್‌ ಅವರನ್ನು ಪರಾಭವಗೊಳಿಸಿದರು.

ಪ್ರಜ್ಞಾನಂದ ದಿನದ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಅಬ್ದುಸತ್ತಾರೋವ್‌ ಮತ್ತು ಅಮೆರಿಕದ ವೆಸ್ಲಿ ಸೊ ಜೊತೆ ‘ಡ್ರಾ’ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.