ADVERTISEMENT

ನುಡಿ ನಮನ | ಗ್ರಾಮೀಣ ಕ್ರೀಡೆಗಳ ಕೊಂಡಿ ಮಲ್ಲಕಂಬ ಪಾಟೀಲರು

ಗಿರೀಶದೊಡ್ಡಮನಿ
Published 6 ಮೇ 2023, 22:35 IST
Last Updated 6 ಮೇ 2023, 22:35 IST
ಪಾಟೀಲ
ಪಾಟೀಲ   
ಸೌಲಭ್ಯಗಳು ಮರೀಚಿಕೆ ಎನ್ನುವ ಸಂದರ್ಭದಲ್ಲೂ ಸ್ಥಳೀಯ ಆಟಗಳಲ್ಲಿ ನುರಿತರನ್ನು ತಯಾರು ಮಾಡುತ್ತಿದ್ದವರು ‘ಮಲ್ಲಕಂಬದ ‍ಪಾಟೀಲ’ರು. ಮಲ್ಲಕಂಬವು ಈಗ ಖೇಲೊ ಇಂಡಿಯಾದಲ್ಲಿ ಸೇರ್ಪಡೆಯಾಗಿದೆ. ಇದಕ್ಕೆ ಅವರ ಕ್ರೀಡಾ ಪ್ರೀತಿಯೇ ಕಾರಣ. ಪಾಟೀಲರು ಇನ್ನು ಬರೀ ನೆನಪು...

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮಲ್ಲಕಂಬದ ನೆಲೆಯೂರಾಗಲು ಕಾರಣರಾದವರು ನಿಂಗನಗೌಡ ಶಿವನಗೌಡ ಪಾಟೀಲರು. ಮಲ್ಲಕಂಬ ಕ್ರೀಡೆಯ ಮೂಲಕ ಗ್ರಾಮೀಣ ಭಾಗದ ದೊಡ್ಡ ಯುವಸಮುದಾಯವೊಂದನ್ನು, ದೇಹ ಕಟ್ಟಿ ದೇಶ ಕಟ್ಟಲು ಅಣಿ ಮಾಡಿದ ಶ್ರೇಯ ಅವರದ್ದು. ಅದಕ್ಕಾಗಿಯೇ ಅವರು ‘ಮಲ್ಲಕಂಬದ ಪಾಟೀಲರು‘ ಎಂದೇ ಪರಿಚಿತರು.

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅವರು ಅದೇ ವಿಷಯದ ಪ್ರಾಧ್ಯಾಪಕರಾಗಬಹುದಿತ್ತು.  ಆದರೆ, ಪಾಟೀಲರು ಎಂ.ಎ. ಜೊತೆಗೆ ದೈಹಿಕ ಶಿಕ್ಷಣ ಪದವಿ (ಬಿ.ಪಿ ಇಡಿ) ಕೂಡ ಮಾಡಿಕೊಂಡಿದ್ದರು. 1967ರಲ್ಲಿ ಲಕ್ಷ್ಮೇಶ್ವರದಲ್ಲಿ ಮುನ್ಸಿಪಲ್ ಕಾಲೇಜು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಶಿರಹಟ್ಟಿಯ ಹೈಸ್ಕೂಲಿನಲ್ಲಿ ಪಾಟೀಲರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಮುನ್ಸಿಪಲ್ ಕಾಲೇಜು ಪ್ರಾಚಾರ್ಯರಾಗಿದ್ದ ಸದಾನಂದ ಕನವಳ್ಳಿ ಅವರು ಪಾಟೀಲರನ್ನು ತಮ್ಮ ಕಾಲೇಜಿಗೆ ಕರೆತಂದರು. ಅಲ್ಲಿ ಅವರಿಗೆ ಕ್ರೀಡಾ ವಿಭಾಗ ಬೆಳೆಸಲು ಬೆಂಬಲ ನೀಡಿದರು. ಪಾಟೀಲರು ಕ್ರೀಡೆ ಮತ್ತು ಇತಿಹಾಸವನ್ನು ಹದವಾಗಿ ಬೆರೆಸಿ ತರಬೇತಿಗೆ ಒಂದು ಸತ್ವಯುತ ನೆಲೆಗಟ್ಟು ನೀಡಿದ್ದನ್ನು ಕನವಳ್ಳಿಯವರೇ ’ಮಲ್ಲಕಂಬ ಪಾಟೀಲರು‘ ಅಭಿನಂದನಾ ಗ್ರಂಥದಲ್ಲಿ  ಉಲ್ಲೇಖಿಸಿದ್ದಾರೆ.

ಸೌಲಭ್ಯಗಳ ಕೊರತೆಯ ನೆಪಗಳನ್ನು ಅವರೆಂದೂ ಹೇಳಲಿಲ್ಲ. ಯಾರ ಮುಂದೆಯೂ ಸಹಾಯಕ್ಕಾಗಿ ಕೈಚಾಚಲಿಲ್ಲ. ತಮ್ಮ ಕೈಗೆಟುಕುವ ಸೌಲಭ್ಯಗಳನ್ನೇ ಬಳಸಿಕೊಂಡು ಸ್ಥಳೀಯ ಅಟಗಳಲ್ಲಿ ಸಾಧನೆ ಮಾಡುವ ಸೂತ್ರ ಕಂಡುಕೊಂಡರು. ಊರಿನಲ್ಲಿ ಈಜುಕೊಳವಿರದಿದ್ದರೂ ಹಳ್ಳಕೊಳ್ಳಗಳಲ್ಲಿ ಈಜುತ್ತಿದ್ದ ಯುವಕರನ್ನು ಗುರುತಿಸಿದರು. ಬಾವಿಯೊಂದರಲ್ಲಿಯೇ ಅಭ್ಯಾಸ ಮಾಡಿಸಿದರು. ಅವರು ವಿಶ್ವವಿದ್ಯಾಲಯದ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವಂತೆ ಮಾಡಿದರು. ಯೋಗ, ವಾಲಿಬಾಲ್, ಕಬಡ್ಡಿ, ಕುಸ್ತಿ, ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಪರಿಣತ ತರಬೇತುದಾರರನ್ನು ಕರೆತಂದು ತಾಲೀಮು ನೀಡಿದರು.

ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರು ಶಾಲೆ, ಕಾಲೇಜುಗಳ ಮೈದಾನ ಮತ್ತು ತರಗತಿಗಳಿಂದಾಚೆಯೂ ಯಾವ ರೀತಿಯ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಪಾಟೀಲರು. ಅದರಲ್ಲೂ ಮಲ್ಲಕಂಬ ಹಾಗೂ ಅಟ್ಯಾಪಟ್ಯಾ ಕ್ರೀಡೆಗಳ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕ್ರಿಕೆಟ್ ಭರಾಟೆಯ ನಡುವೆಯೂ ಈ ಕ್ರೀಡೆಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಘಟಿಸುತ್ತಿದ್ದರು. ರಾಷ್ಟ್ರೀಯ ಮಲ್ಲಕಂಬ ಸಂಸ್ಥೆಯ ಸಂಸ್ಥಾಪನೆಗೆ ಶ್ರೀಕಾರ ಹಾಕಿದ್ದೇ ಪಾಟೀಲರು.

ಅದೂ ಪುಟ್ಟ ಊರುಗಳಲ್ಲಿಯೇ ಈ ಸ್ಪರ್ಧೆಗಳನ್ನು ಸ್ಥಳೀಯ ನಿವಾಸಿಗಳ ಸಹಭಾಗಿತ್ವದೊಂದಿಗೆ ಆಯೋಜಿಸುತ್ತಿದ್ದರು. ಗ್ರಾಮಸ್ಥರು ತಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನೇ ಸ್ಪರ್ಧಿಗಳಿಗೂ ಉಣಬಡಿಸಿ ಆತಿಥ್ಯ ನೀಡುವ ಸಹಕಾರ ತತ್ವವನ್ನು ಕ್ರೀಡೆಯಲ್ಲಿಯೂ ತಂದವರು ಪಾಟೀಲರು. ಉತ್ತರ ಕರ್ನಾಟಕದ ಕುಗ್ರಾಮಗಳಿಂದ ಬಡಕುಟುಂಬದ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಬಂದು ತರಬೇತಿಗೆ ಅಣಿಗೊಳಿಸಿದರು. ಕಳೆದ ನಾಲ್ಕು ದಶಕಗಳಲ್ಲಿ ಅವರ ಗರಡಿಯಲ್ಲಿ ತರಬೇತಿ ಪಡೆದ ಮಲ್ಲಕಂಬ ಪಟುಗಳು ರಾಷ್ಟ್ರೀಯ ಚಾಂಪಿಯನ್ನರಾದರು. ತರಬೇತುದಾರರೂ ಆಗಿ ಅವರೆಲ್ಲ ಬೇರೆ ರಾಜ್ಯಗಳಲ್ಲಿ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಮಲ್ಲಕಂಬ ಬೆಳೆಸುತ್ತಿದ್ದಾರೆ. 

ಮಲ್ಲಕಂಬ ಈಗ ಖೇಲೊ ಇಂಡಿಯಾದಲ್ಲಿ ಸೇರ್ಪಡೆಯಾಗಿದೆ. ಕೆಲವು ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿಯನ್ನೂ ಪಡೆದುಕೊಂಡಿದೆ. ಇದು ಪಾಟೀಲರ ಹೋರಾಟದ ಫಲ‘ ಎಂದು ಕರ್ನಾಟಕ ಅಮೆಚೂರ್ ಮಲ್ಲಕಂಬ ಸಂಸ್ಥೆ ಕಾರ್ಯದರ್ಶಿ ಎಸ್‌.ಎಫ್. ಕೊಡ್ಲಿ ಸ್ಮರಿಸುತ್ತಾರೆ.

ದಶಕಗಳ ಹಿಂದೆ ರಷ್ಯಾದಲ್ಲಿ ನಡೆದ ಉತ್ಸವದಲ್ಲಿಯೂ ಭಾರತ ಮಲ್ಲಕಂಬ ತಂಡಕ್ಕೆ ಪ್ರದರ್ಶನದ ಅವಕಾಶ ಸಿಕ್ಕಿದ್ದು ಪಾಟೀಲರ ಪ್ರಯತ್ನದಿಂದಾಗಿಯೇ. ಪ್ರತಿವರ್ಷವೂ ಕರ್ನಾಟಕದ ಒಂದೊಂದು ಜಿಲ್ಲೆಯಲ್ಲಿ ರಾಜ್ಯ ಮಲ್ಲಕಂಬ ಚಾಂಪಿಯನ್‌ಷಿಪ್ ನಡೆಸುವ ಮೂಲಕ ಕ್ರೀಡೆಯ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಭಾಷಣ, ಬರೆವಣಿಗೆಯ ಮೂಲಕವೂ ಗ್ರಾಮೀಣ ಕ್ರೀಡೆಗಳಿಗೆ ಮಹತ್ವದ ಕೊಂಡಿಯಾಗಿದ್ದರು. 

ಆ ಕ್ರೀಡೆಗಳ ಮೂಲಕ ಹಳ್ಳಿಗಾಡಿನ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಸೇರುವಂತಹ ಪ್ರಕ್ರಿಯೆಯು ಸದ್ದಿಲ್ಲದೇ ನಡೆಯುತ್ತಿತ್ತು. ಇಂತಹ ಸಾಧನೆಯ ರೂವಾರಿ ’ಮಲ್ಲಕಂಬ ಪಾಟೀಲರು‘ ಶನಿವಾರ(ಮೇ 5) ನಿಧನರಾದರು. ಅವರ ಹೆಜ್ಜೆಗುರುತುಗಳು ಮಾತ್ರ ಗ್ರಾಮೀಣ ಕ್ರೀಡಾಂಗಣದಲ್ಲಿ  ಅಚ್ಚಳಿಯದೇ ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.