ADVERTISEMENT

ವಿಶ್ವಕಪ್‌ ಶೂಟಿಂಗ್: ಅಖಿಲ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 16:10 IST
Last Updated 16 ಅಕ್ಟೋಬರ್ 2024, 16:10 IST
ಅಖಿಲ್‌ ಶಿಯೋರಾಣ್
ಅಖಿಲ್‌ ಶಿಯೋರಾಣ್   

ನವದೆಹಲಿ: ಈ ವರ್ಷ ಭಾರತದ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದ ನಡುವೆ ಶೂಟರ್ ಅಖಿಲ್‌ ಶಿಯೊರಾಣ್ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್‌ನಲ್ಲಿ ಬುಧವಾರ ಪುರುಷರ 50 ಮೀ. ರೈಫಲ್ 3– ಪೊಷಿಷನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡು ಗಮನ ಸೆಳೆದರು.

ಕರ್ಣಿ ಸಿಂಗ್ ರೇಂಜ್‌ನಲ್ಲಿ ಮಹಿಳೆಯರ 50 ಮೀ. ರೈಫಲ್‌ 3–ಪೊಸಿಷನ್ಸ್ ಸ್ಪರ್ಧೆಯಲ್ಲಿ ಆಶಿ ಚೋಸ್ಕಿ ಮತ್ತು ನಿಶ್ಚಲ್ ಅವರು ಪದಕದ ಸುತ್ತಿಗೇರಲಿಲ್ಲ. ಇನ್ನೊಂದೆಡೆ 25 ಮೀ. ಸ್ಪೋರ್ಟ್ಸ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಶೂಟ್ ಆಫ್‌ನಲ್ಲಿ ಒಲಿಂಪಿಯನ್‌ ರಿದಂ ಸಂಗ್ವಾನ್, ಚೀನಾದ ಸ್ಪರ್ಧಿ ಎದುರು ಸೋತು ನಿರಾಶೆ ಅನುಭವಿಸಿದರು.

ಇದರ ಮಧ್ಯೆ ವರ್ಷದ ಈ ಕೊನೆಯ ಸ್ಪರ್ಧೆಯಲ್ಲಿ ಭಾಗಪತ್‌ನ ಅಖಿಲ್, ಚೀನಾದ ಲಿಯು ಯುಕುನ್ ಅವರ ಪ್ರಬಲ ಸವಾಲನ್ನು ಮೀರಿ ನಿಂತು 452.6 ಸ್ಕೋರ್‌ನೊಡನೆ ಮೂರನೇ ಸ್ಥಾನ ಪಡೆದರು. ಯುಕುನ್‌, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದು, ಇಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿದರು.

ADVERTISEMENT

ಹಂಗರಿಯ ಇಸ್ತವಾನ್ ಪೆನಿ (465.3) ತಮ್ಮ ನೆಚ್ಚಿನ ಈ ತಾಣದಲ್ಲಿ ಚಿನ್ನ ಗೆದ್ದುಕೊಂಡರು. ಅವರು 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸೋಮವಾಗ ಬೆಳ್ಳಿ ಪಡೆದಿದ್ದರು.

ಅಖಿಲ್ ಒಲಿಂಪಿಕ್ಸ್‌ ಕೋಟಾ ಪಡೆದಿದ್ದರೂ, ಗಾಯಾಳಾದ ಕಾರಣ ನವದೆಹಲಿ ಮತ್ತು ಭೋಪಾಲ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಆಗಿರಲಿಲ್ಲ.

‘ನಿರಾಸೆಯಿಂದ ಹೊರಬಂದಿದ್ದೇನೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸಿದ್ದೇನೆ’ ಎಂದು ಹೇಳಿದರು.

ಮಂಗಳವಾರ, ಸೋನಮ್ ಮಸ್ಕರ್ ಅವರು ಮಹಿಳೆಯರ 10 ಮೀ. ಏರ್‌ ರೈಫಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಒಲಿಂಪಿಯನ್ ವಿಜಯ್‌ವೀರ್ ಸಿಧು ಮತ್ತು ಅನಿಶ್ ಭಾನವಾಲಾ ಅವರು 25 ಮೀ. ರ‍್ಯಾಪಿಡ್‌ ಫೈರ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಏಳು ಮತ್ತು ಒಂಬತ್ತನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.