ನವದೆಹಲಿ: ದೇಶದ ಅಗ್ರಗಣ್ಯ ಪ್ಯಾರಾ ಹೈಜಂಪ್ ಪಟು ಮಾರಿಯಪ್ಪನ್ ತಂಗವೇಲು, ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಆಯೋಜನೆಯಾಗಲಿರುವ ಬಹುನಿರೀಕ್ಷಿತ ಟೋಕಿಯೊ ಪ್ಯಾರಾಲಿಂಪಿಕ್ಸ್, ಆಗಸ್ಟ್ 24ರಿಂದ ಸೆಪ್ಟೆಂಬರ್ 5ರ ವರೆಗೆ ಸಾಗಲಿದೆ.
2016ರಲ್ಲಿ ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆದ ಪ್ಯಾರಾಂಲಿಪಿಕ್ಸ್ ಕ್ರೀಡಾಕೂಟದಲ್ಲಿ ತಂಗವೇಲು ಚಿನ್ನದ ಪದಕ (ಹೈಜಂಪ್ ಟಿ-42 ವಿಭಾಗ) ಗೆದ್ದಿದ್ದರು.
'ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಾರಿಯಪ್ಪನ್ ತಂಗವೇಲು, ಭಾರತದ ಧ್ವಜಧಾರಿಯಾಗಲಿದ್ದಾರೆ. ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಪ್ಯಾರಾ-ಅಥ್ಲೆಟಿಕ್ಸ್ ಮುಖ್ಯಸ್ಥ ಆರ್. ಸತ್ಯನಾರಾಯಣ ತಿಳಿಸಿದ್ದಾರೆ.
ತಮಿಳುನಾಡು ಮೂಲದ 25 ವರ್ಷದ ತಂಗವೇಲು ಅವರಿಗೆ ಕಳೆದ ವರ್ಷ ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ 'ಖೇಲ್ ರತ್ನ' ನೀಡಿ ಗೌರವಿಸಲಾಗಿತ್ತು. ಈಗ ಟೋಕಿಯೊ ಪ್ಯಾರಾಂಲಿಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ 24 ಪ್ಯಾರಾ-ಅಥ್ಲೆಟಿಕ್ಸ್ ಕ್ರೀಡಾಪಟುಗಳನ್ನು ಮುನ್ನಡೆಸುವ ಅದೃಷ್ಟ ಒಲಿದು ಬಂದಿದೆ.
ಜೂನ್ 29 ಹಾಗೂ 30ರಂದು ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 18 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 72 ಮಂದಿ ಭಾಗವಹಿಸಿದ್ದರು. ಭಾರತದಿಂದ ನಾಲ್ವರು ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 24 ಕ್ರೀಡಾಪಟುಗಳಿಗೆ ಸ್ಪರ್ಧಿಸಲು ವಿಶ್ವ ಪ್ಯಾರಾ-ಅಥ್ಲಿಟಿಕ್ಸ್ ಅವಕಾಶ ಕಲ್ಪಿಸಿದೆ.
2019ರಲ್ಲಿ ದುಬೈನಲ್ಲಿ ನಡೆದ ಐಪಿಸಿ ವಿಶ್ವ ಅಥ್ಲಿಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹೈಜಂಪ್ ಟಿ-42 ವಿಭಾಗದಲ್ಲಿ ಮೂರನೇ ಸ್ಥಾನ ಗಿಟ್ಟಿಸುವ ಮೂಲಕ ತಂಗವೇಲು, ಟೋಕಿಯೊ ಪ್ಯಾರಾಂಲಿಪಿಕ್ಸ್‌ಗೆ ತೇರ್ಗಡೆ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.