ADVERTISEMENT

ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಶಾಮಿಲ್, ಶ್ರೀಜಾಗೆ ‘ಹ್ಯಾಟ್ರಿಕ್‌’ ಚಿನ್ನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
ರೋಡ್ ರೇಸ್‌ನಲ್ಲಿ ಮುನ್ನುಗ್ಗಿದ ಸ್ಕೇಟರ್‌ಗಳು
ರೋಡ್ ರೇಸ್‌ನಲ್ಲಿ ಮುನ್ನುಗ್ಗಿದ ಸ್ಕೇಟರ್‌ಗಳು   

ಮಂಗಳೂರು: ರಿಂಕ್ ಮತ್ತು ರೋಡ್‌ ರೇಸ್‌ನಲ್ಲಿ ಮಿಂಚು ಹರಿಸುತ್ತಿರುವ ದಕ್ಷಿಣ ಕನ್ನಡದ ಮುಹಮ್ಮದ್ ಶಾಮಿಲ್ ಅರ್ಷದ್‌ ಮತ್ತು ಮೈಸೂರಿನ ಶ್ರೀಜಾ ರಾವ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಶನಿವಾರವೂ ಚಿನ್ನ ಗೆದ್ದು ಸಂಭ್ರಮಿಸಿದರು.

ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್‌ ಸಂಸ್ಥೆಗಳು ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ 14ರಿಂದ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಾಮಿಲ್ ಮೊದಲ ದಿನ ಇನ್‌ಲೈನ್ ಡ್ಯುಲ್ ಟಿಟಿಯಲ್ಲಿ ಮೊದಲಿಗರಾಗಿದ್ದರು. ಎರಡನೇ ದಿನ ಇನ್‌ಲೈನ್ ರೋಡ್ ರೇಸ್ 1 ಲ್ಯಾಪ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದರು. ಶನಿವಾರ ಇನ್‌ಲೈನ್–3, 100 ಮೀಟರ್ಸ್ ರೋಡ್ ರೇಸ್‌ನಲ್ಲಿ ಮಿಂಚಿನ ಸಂಚಾರ ಮೂಡಿಸಿದರು. ಮೈಸೂರಿನ ಹರ್ಷಿತ್ (11.32 ಸೆ) ಮತ್ತು ಬೆಂಗಳೂರಿನ ಮನೋಮಯ್ (11.49 ಸೆ) ಅವರ ಪೈಪೋಟಿಯನ್ನು ಮೀರಿದ ಶಾಮಿಲ್ 11.6 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇದೇ ರೇಸ್‌ನ 11ರಿಂದ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರೀಜಾಗೆ ಬೆಂಗಳೂರಿನ ತೋರ್ಷಾ ಪ್ರಶಾಂತ್ (13.11ಸೆ) ಮತ್ತು ಮೈಸೂರಿನ ಪ್ರೇರಣಾ (13.79ಸೆ) ಅವರ ಸವಾಲು ಎದುರಾಗಿತ್ತು. 12.57 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಸಂಭ್ರಮಿಸಿದರು. ಮೊದಲೆರಡು ದಿನ ರಿಂಕ್‌ನ ಇನ್‌ಲೈನ್ ಡ್ಯುಯಲ್ ಟಿಟಿ ಮತ್ತು ಇನ್‌ಲೈನ್ ರೋಡ್‌ ರೇಸ್‌ 1ಲ್ಯಾಪ್‌ನಲ್ಲಿ ಅವರು ಚಿನ್ನ ಗೆದ್ದುಕೊಂಡಿದ್ದರು.

ADVERTISEMENT

ಇನ್‌ಲೈನ್ ರೋಡ್ ರೇಸ್‌ 1 ಲ್ಯಾಪ್‌ನಲ್ಲಿ ಶುಕ್ರವಾರ ಚಿನ್ನ ಗಳಿಸಿದ್ದ ಬೆಂಗಳೂರಿನ ಧನುಷ್ ಮತ್ತು ಕಲ್ಪನಾ ಕುಟ್ಟಪ್ಪ ಶನಿವಾರ ಇನ್‌ಲೈನ್–3, 100 ಮೀಟರ್ಸ್ ರೋಡ್ ರೇಸ್‌ನ ಚಿನ್ನವನ್ನೂ ತಮ್ಮದಾಗಿಸಿಕೊಂಡರು.

ಮೂರನೇ ದಿನದ ಫಲಿತಾಂಶಗಳು  (ಚಿನ್ನ ಮಾತ್ರ): ಇನ್‌ಲೈನ್–3, 100 ಮೀಟರ್ಸ್ ರೋಡ್ ರೇಸ್‌: ಪುರುಷರು: ಧನುಷ್ ಬಾಬು (ಬೆಂಗಳೂರು) ಕಾಲ: 10.46 ಸೆ; ಮಹಿಳೆಯರು: ಕಲ್ಪನಾ ಕುಟ್ಟಪ್ಪ (ಬೆಂಗಳೂರು) ಕಾಲ: 12.33 ಸೆ; 14ರಿಂದ 17 ವರ್ಷದ ಬಾಲಕರು: ಮುಹಮ್ಮದ್ ಶಾಮಿಲ್ ಅರ್ಷದ್‌ (ದಕ್ಷಿಣ ಕನ್ನಡ) ಕಾಲ:11.06 ಸೆ; ಬಾಲಕಿಯರು: ಪ್ರತೀಕ್ಷಾ ಕೆ.ಎಸ್‌ (ಮೈಸೂರು) ಕಾಲ: 12.29 ಸೆ; 11ರಿಂದ 14 ವರ್ಷದ ಬಾಲಕರು: ಮಾರುತಿ ನಾಯಕ್‌ (ಬೆಂಗಳೂರು) ಕಾಲ: 11.7 ಸೆ; ಬಾಲಕಿಯರು: ಶ್ರೀಜಾ ರಾವ್‌ (ಮೈಸೂರು) ಕಾಲ: 12.57 ಸೆ; ಕ್ವಾಡ್‌: ರಿಂಕ್‌–2, 500+ಡಿ: ಪುರುಷರು: ವಿವೇಕ್‌ (ದಕ್ಷಿಣ ಕನ್ನಡ) ಕಾಲ: 55.63 ಸೆ; ಮಹಿಳೆಯರು: ಡಿಂಪಲ್ ಗೌಡ (ಬೆಂಗಳೂರು) ಕಾಲ: 57.56 ಸೆ; 14ರಿಂದ 17 ವರ್ಷದ ಬಾಲಕರು: ಮೌರ್ಯ ರೆಡ್ಡಿ (ಬೆಂಗಳೂರು) ಕಾಲ: 52.9 ಸೆ; ಬಾಲಕಿಯರು: ಪೂರ್ವಿ ಛಡ್ಡ (ಬೆಂಗಳೂರು); ಕಾಲ: 57.18 ಸೆ; 11ರಿಂಧ 14 ವರ್ಷದ ಬಾಲಕರು: ಋತವ್ ಪ್ರದೀಪ್ (ಬೆಂಗಳೂರು) ಕಾಲ: 58.41 ಸೆ; ಬಾಲಕಿಯರು: ಪ್ರಣವಿ ಶೆಟ್ಟಿ (ಮೈಸೂರು) ಕಾಲ: 57.82 ಸೆ; 9ರಿಂದ 11 ವರ್ಷದ ಬಾಲಕರು: ಸೂರಜ್ ಸ್ವಾಯಿನ್ (ಬೆಂಗಳೂರು) ಕಾಲ: 58.19 ಸೆ; ಬಾಲಕಿಯರು: ನೀಳಾ ಸಂಪತ್‌ (ಶಿವಮೊಗ್ಗ) ಕಾಲ: 1 ತಾಸು 2ನಿ; 7ರಿಂದ 9 ವರ್ಷದ ಬಾಲಕರು: ಅವಧೂತ್‌ ಮೋರೆ (ಬೆಳಗಾವಿ) ಕಾಲ: 1 ತಾಸು 1.56 ಸೆ; ಲೇಖನಾ ಗೌಡ (ಬೆಂಗಳೂರು) ಕಾಲ:  1 ತಾಸು 6.31 ನಿ; ರಿಂಕ್‌–2, 2 ಲ್ಯಾಪ್‌: ಬಾಲಕರು: ಹರಶಿವ್‌ ಎಚ್‌ (ಬೆಂಗಳೂರು) ಕಾಲ: 1 ತಾಸು 1.69 ನಿ; ಬಾಲಕಿಯರು: ಜನ್ಯಶ್ರೀ (ಬೆಂಗಳೂರು) ಕಾಲ: 1 ತಾಸು 88 ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.