ಭೋಪಾಲ್: ಭಾರತದ ರುದ್ರಾಕ್ಷ್ ಪಾಟೀಲ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು.
ರುದ್ರಾಕ್ಷ್ ಅವರಿಗೆ ಚಾಂಪಿಯನ್‌ಷಿಪ್‌ನಲ್ಲಿ ದೊರೆತ ಎರಡನೇ ಪದಕ ಇದು. ಗುರುವಾರ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲೂ ಅವರು ಕಂಚು ಗೆದ್ದುಕೊಂಡಿದ್ದರು.
ಅರ್ಹತಾ ಸುತ್ತಿನಲ್ಲಿ 631.0 ಪಾಯಿಂಟ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರುದ್ರಾಕ್ಷ್ ರ್‍ಯಾಂಕಿಂಗ್ ಸುತ್ತು ಪ್ರವೇಶಿಸಿದ್ದರು. ಅಂತಿಮವಾಗಿ 262.3 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಪಡೆದರು. 264.2 ಪಾಯಿಂಟ್ಸ್ ಗಳಿಸಿದ ಚೀನಾದ ಶೆಂಗ್ ಲಿಹಾವೊ ಚಿನ್ನ ಗೆದ್ದರೆ, ದು ಲಿನ್‌ಶು (263.3) ಬೆಳ್ಳಿ ಪಡೆದುಕೊಂಡರು.
ರಮಿತಾಗೆ ನಾಲ್ಕನೇ ಸ್ಥಾನ: ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಭಾರತದ ರಮಿತಾ ಅವರು ಕಂಚಿನ ಪದಕದ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡು ನಾಲ್ಕನೇ ಸ್ಥಾನ ಗಳಿಸಿದರು.
ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಕಜಕಸ್ತಾನದ ಅಲೆಕ್ಸಾಂಡ್ರಾ ಲಿ ಅವರು ರಮಿತಾ ವಿರುದ್ಧ ಗೆದ್ದರು. ಅಲೆಕ್ಸಾಂಡ್ರಾ 261.2 ಪಾಯಿಂಟ್ಸ್ ಗಳಿಸಿದರೆ, ಭಾರತದ ಶೂಟರ್ 260.5 ಪಾಯಿಂಟ್ಸ್ ಕಲೆಹಾಕಿದರು.
ಚೀನಾದ ಹುವಾಂಗ್ ಯೂತಿಂಗ್ ಚಿನ್ನ ಜಯಿಸಿದರೆ, ಅಮೆರಿಕದ ಮೇರಿ ಟಕರ್ ಅವರು ಬೆಳ್ಳಿ ಪಡೆದರು.
ಚಾಂಪಿಯನ್‌ಷಿಪ್‌ನಲ್ಲಿ ಚೀನಾ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದೆ. ಮೂರನೇ ದಿನದ ಸ್ಪರ್ಧೆಗಳ ಬಳಿಕ ಚೀನಾ ಐದು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.