ದೋಹಾ: ಈ ಭಾಗದಲ್ಲಿ ಮಧ್ಯರಾತ್ರಿಯಾದರೂ ಇರುವ ಉರಿ ತಾಪ, ಸೆಕೆಯನ್ನು ಮೀರಿನಿಂತ ಕೆನ್ಯಾದ ರುತ್ ಚೆಪ್‌ಗೆಟಿಚ್, 17ನೇ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಮ್ಯಾರಥಾನ್ ಓಟದಲ್ಲಿ ಮೊದಲಿಗರಾದರು. ಆ ಮೂಲಕ ಚಾಂಪಿಯನ್‌ಷಿಪ್‌ನ ಮೊದಲ ಸ್ವರ್ಣ ಪಡೆದ ಸಂಭ್ರಮ 25 ವರ್ಷದ ಚಿಪ್‌ಗೆಟಿಚ್‌ಅವರದಾಯಿತು.
ಕಣದಲ್ಲಿದ್ದ 68 ಮಂದಿಯಲ್ಲಿ ಎರಡು ಡಜನ್‌ನಷ್ಟು ಓಟಗಾರರಿಗೆ ನಿಗದಿ ದೂರವನ್ನು (42 ಕಿ.ಮೀ. 195 ಮೀ.) ಪೂರೈಸಲು ಸಹ ಆಗಲಿಲ್ಲ. ಹೊನಲುಬೆಳಕಿನಲ್ಲಿ ನಡೆದ ಈ ಸ್ಪರ್ಧೆಯನ್ನು, ಚೆಪ್‌ಗೆಟಿಚ್ 2 ಗಂಟೆ 32 ನಿಮಿಷ 43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಅವರು ಸ್ಥಳೀಯ ಕಾಲಮಾನ ಮಧ್ಯರಾತ್ರಿ 2.30ಕ್ಕೆ ಸ್ಪರ್ಧೆ ಮುಗಿಸಿದರು.
ಹಿಂದಿನ ಸಲದ ಚಾಂಪಿಯನ್ ರೋಸ್ ಚೆಲಿಮೊ (ಬಹರೇನ್) ಅವರು ಒಂದು ನಿಮಿಷ ಹೆಚ್ಚು ತೆಗೆದುಕೊಂಡು ಎರಡನೇ ಸ್ಥಾನ ಪಡೆದರೆ, ನಮೀಬಿಯಾದ ಹೆಲಾಲಿಯಾ ಜೊಹಾನೆಸ್ ಕಂಚಿನ ಪದಕ ಪಡೆದರು.
ರಾತ್ರಿಯಾದರೂ 32 ಡಿಗ್ರಿ ಸೆಲ್ಷಿಯಸ್ ತಾಪವಿತ್ತು. ಓಟದ ವೇಳೆ ಬವಳಿದ ಕೆಲವರನ್ನು ಸ್ಟ್ರೆಚರ್‌ನಲ್ಲಿ ಒಯ್ಯುತ್ತಿರುವುದು ಕಂಡುಬಂತು. ಮತ್ತೆ ಕೆಲವರನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ಯಲಾಯಿತು! ಅಥ್ಲೀಟುಗಳಿಗೆ ನೆರವಾಗಲು ಹೆಚ್ಚುವರಿ ವೈದ್ಯಸಿಬ್ಬಂದಿ ನಿಯೋಜಿಸಲಾಗಿತ್ತು. ಓಟದ ವೇಳೆ ದಾಹ ನೀಗಿಸಲು ಹೆಚ್ಚುವರಿ ನೀರಿನ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ ಇದೇನೂ ಸಾಕಾಗಲಿಲ್ಲ.
ಹಿಂದೆಸರಿದ ನೈಜೆಲ್ ಅಮೋಸ್:
ಪುರುಷರ 800 ಮೀ. ಓಟದಲ್ಲಿ ಫೆವರೀಟ್ ಆಗಿರುವ ಬೋಟ್ಸ್‌ವಾನಾದ ನೈಜೆಲ್ ಅಮೋಸ್, ಹಿಮ್ಮಡಿ ನೋವಿನಿಂದಾಗಿ ತಮ್ಮ ಸ್ಪರ್ಧೆ ಆರಂಭವಾಗುವ ಸ್ವಲ್ಪವೇ ಮೊದಲು ಹಿಂದೆ ಸರಿಯುವುದಾಗಿ ಪ್ರಕಟಿಸಿದರು.
ಆಕ್ರೋಶ:ದೋಹಾದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಸಲು ಮುಂದಾಗುವ ಮೂಲಕ ಸಂಘಟಕರು ಅಥ್ಲೀಟುಗಳನ್ನು ಅಪಾಯಕ್ಕೆ ದೂಡಿದ್ದಾರೆ ಎಂದು ಡೆಕಾಥ್ಲಾನ್ ತಾರೆ ಕೆವಿನ್ ಮೇಯರ್ ದೂರಿದ್ದಾರೆ.
ವಿಪರೀತ ಬಿಸಿಲಿನ ಕಾರಣ ಮಹಿಳೆಯರ ಮ್ಯಾರಥಾನ್ ಓಟವನ್ನು ಮಧ್ಯರಾತ್ರಿ ನಡೆಸಿದರೂ 32 ಡಿಗ್ರಿ ಸೆಲ್ಷಿಯಸ್ ತಾಪ ಮತ್ತು ಸೆಕೆಯ ಕಾರಣ 68 ಅಥ್ಲೀಟುಗಳಲ್ಲಿ 28 ಮಂದಿ ರೇಸ್ ಪೂರ್ಣಗೊಳಿಸಲು ವಿಫಲರಾಗಿದ್ದರು.
50 ಕಿ.ಮೀ. ನಡಿಗೆಯಲ್ಲಿ ವಿಶ್ವ ಚಾಂಪಿಯನ್ ಯೊಹಾನ್ ಡಿನಿಜ್ ಕೂಡ ‘ಕೆಂಡಾ’ಮಂಡಲರಾಗಿದ್ದು, ‘ಐಎಎಎಫ್ ಅಥ್ಲೀಟುಗಳನ್ನು ಮೂರ್ಖರೆಂದು ಭಾವಿಸಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.