ಬೆಂಗಳೂರು: ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಲ್ಲ ಮತ್ತು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಶಂಕೆಯ ಮೇಲೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಭಾರತ ಪ್ಯಾರಾಲಿಂಪಿಕ್ ಸಮಿತಿಯಿಂದ (ಪಿಸಿಐ) ಸ್ಪಷ್ಟನೆ ಕೇಳಿದೆ.
ನಗರದಲ್ಲಿ ಬುಧವಾರ ಆರಂಭಗೊಂಡಿರುವ ಕೂಟದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯೂ ನಡೆಯಲಿದೆ. ಚೆನ್ನೈನಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟವನ್ನು ಮೂರು ದಿನಗಳ ಹಿಂದೆ ಚೆನ್ನೈಯಿಂದ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಕಂಠೀರವ ಮತ್ತು ವಿದ್ಯಾನಗರದಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಪ್ಯಾರಾ ಅಥ್ಲೀಟ್‌ಗಳಿಗೆ ಅನುಕೂಲಕ್ಕೆ ಬೇಕಾದ ತಯಾರಿ ನಡೆಸಿಲ್ಲ ಎಂದಿರುವ ಸಾಯ್ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಸೂಚಿಸಿದೆ.
‘ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಅಂಗವಿಕಲ ಕ್ರೀಡಾಪಟುಗಳಿಗಾಗಿ ಒದಗಿಸಬೇಕಾದ ಸೌಲಭ್ಯಗಳಲ್ಲಿ ಲೋಪವಾಗಿದೆ. ಕೋವಿಡ್ ತಡೆಗೆ ಸಂಬಂಧಸಿದ ಎಸ್‌ಒಪಿಯನ್ನು ಪಾಲಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಸ್ಪಷ್ಟನೆ ಕೇಳಲಾಗಿದೆ. ಎಲ್ಲ ಬಗೆಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಮುಂದುವರಿಯುವಂತೆ ತಿಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಸಾಯ್ ತಿಳಿಸಿದೆ.
ಮೂರು ದಿನಗಳ ಕೂಟದಲ್ಲಿ 27 ರಾಜ್ಯಗಳ 900 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದು ರಿಯೊ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನ ಟಿ–42 ವಿಭಾಗದಲ್ಲಿ ಚಿನ್ನ ಗೆದ್ದಿರುವ ಮರಿಯಪ್ಪನ್ ತಂಗವೇಲು ಮತ್ತು ಎಫ್44 ವಿಭಾಗದ ಜಾವೆಲಿನ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಸಂದೀಪ್ ಚೌಧರಿ ಸ್ಪರ್ಧಾಳುಗಳಲ್ಲಿ ಪ್ರಮುಖರು.
‘ಸುರಕ್ಷಾ ಕ್ರಮಗಳಲ್ಲಿ ಲೋಪ ಆಗಲಿಲ್ಲ’
ಚಾಂಪಿಯನ್‌ಷಿಪ್‌ನಲ್ಲಿ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಯಾವ ಲೋಪವೂ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಪಿಸಿಐನ ತಾಂತ್ರಿಕ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಆದರೂ ನೋಟಿಸ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡಲಾಗಿದೆ. ಕ್ರೀಡಾಪಟುಗಳಿಗೆ ಎಲ್ಲ ಬಗೆಯ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೆಲವರು ವೈಯಕ್ತಿಕ ಸುರಕ್ಷತೆಯ ಕಡೆಗೆ ಗಮನ ನೀಡುವಲ್ಲಿ ಉದಾಸೀನ ಮಾಡಿರಬಹುದು. ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಧರಿಸಲು ಮತ್ತು ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿದೆ. ಎಲ್ಲ ಕಡೆ ಫಲಕಗಳನ್ನು ಅಂಟಿಸಲಾಗಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ಸ್ಪಷ್ಟನೆಯನ್ನು ಸಾಯ್‌ಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.