ADVERTISEMENT

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ಸೈನಾ

ಸಮೀರ್‌, ವೈಷ್ಣವಿಗೆ ನಿರಾಸೆ

ಪಿಟಿಐ
Published 26 ಸೆಪ್ಟೆಂಬರ್ 2018, 17:49 IST
Last Updated 26 ಸೆಪ್ಟೆಂಬರ್ 2018, 17:49 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಸೋಲ್‌: ಭಾರತದ ಸೈನಾ ನೆಹ್ವಾಲ್‌ ಅವರು ಕೊರಿಯಾ ಓಪನ್‌ ವಿಶ್ವ ಬ್ಯಾಡ್ಮಿಂಟನ್‌ ಸೂಪರ್‌ 500 ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಸೈನಾ, 21–12, 21–11ರಿಂದ ಕೊರಿಯಾದ ಕಿಮ್‌ ಹ್ಯೊ ಮಿನ್‌ ಅವರನ್ನು ಮಣಿಸಿದರು. ಮುಂದಿನ ಪಂದ್ಯದಲ್ಲಿ ಭಾರತದ ಆಟಗಾರ್ತಿಯು ಸ್ಥಳೀಯ ಆಟಗಾರ್ತಿ ಕಿಮ್‌ ಗಾ ಉನ್‌ ಅವರನ್ನು ಎದುರಿಸಲಿದ್ದಾರೆ.

ಪಂದ್ಯದ ಆರಂಭದಿಂದಲೂ ಸೈನಾ ಅವರು ಪ್ರಾಬಲ್ಯ ಮೆರೆದರು. ಅವರ ಆಕ್ರಮಣಕಾರಿ ಆಟದ ಮುಂದೆ ಎದುರಾಳಿಯ ಆಟವು ಸಪ್ಪೆಯಾಯಿತು. ಕಿಮ್‌ ಅವರು ಆಟಕ್ಕೆ ಕುದುರಿಕೊಳ್ಳುವ ಹೊತ್ತಿಗೆ ಸೈನಾ 12–3ರಿಂದ ಮುನ್ನಡೆ ಸಾಧಿಸಿದ್ದರು. ಧೀರ್ಘ ರ‍್ಯಾಲಿಗಳ ಮೂಲಕ ಎದುರಾಳಿಯನ್ನು ಸೈನಾ ಕಟ್ಟಿಹಾಕಿದರು. ಈ ಅವಧಿಯಲ್ಲಿ ಕಿಮ್‌ ಹಲವು ತಪ್ಪುಗಳನ್ನು ಎಸಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಭಾರತದ ಆಟಗಾರ್ತಿ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಗೇಮ್‌ನ ಆರಂಭದಿಂದಲೇ ಸೈನಾ ಆಟ ರಂಗೇರಿತು. ಆಕರ್ಷಕ ಸ್ಮ್ಯಾಷ್‌, ಮನಮೋಹಕ ರಿಟರ್ನ್‌ಗಳಿಂದ ಗಮನಸೆಳೆದರು. ಅವರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ವಿಫಲರಾದ ಕಿಮ್‌ ಗೇಮ್‌ ಸೋತು ಪಂದ್ಯ ಬಿಟ್ಟುಕೊಟ್ಟರು.

ಇನ್ನೊಂದು ಪಂದ್ಯದಲ್ಲಿ ವೈಷ್ಣವಿ ಜಕ್ಕಾ ರೆಡ್ಡಿ, 10–21, 9–21ರಲ್ಲಿ ಅಮೆರಿಕದ ಬೀವೆನ್‌ ಜಾಂಗ್‌ ವಿರುದ್ಧ ಪರಾಭವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಅವರ ಹೋರಾಟ ಅಂತ್ಯವಾಯಿತು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸಮೀರ್‌ ವರ್ಮಾ ಅವರು ನಿರಾಸೆ ಅನುಭವಿಸಿದರು. ಅವರು 21–15, 16–21, 7–21ರಲ್ಲಿ ಡೆನ್ಮಾರ್ಕ್‌ನ ಆ್ಯಂಡ್ರೆಸ್‌ ಅಂಟೊನ್ಸೆನ್‌ ಎದುರು ಮಣಿದರು.

ಜಿದ್ದಾಜಿದ್ದಿನ ಹೋರಾಟ ಕಂಡು ಬಂದ ಮೊದಲ ಗೇಮ್‌ನಲ್ಲಿ ಸಮೀರ್‌ ಅವರು ಎದುರಾಳಿಯ ಸವಾಲು ಮೀರಲು ಯಶಸ್ವಿಯಾದರು. ಎರಡನೇ ಗೇಮ್‌ನ ಆರಂಭದಲ್ಲಿ ಅವರು ಮುನ್ನಡೆ ಸಾಧಿಸಿದ್ದರು. ಆದರೆ, ಹಲವು ತಪ್ಪುಗಳನ್ನು ಎಸಗಿ ಪಾಯಿಂಟ್ಸ್‌ ಕಳೆದುಕೊಂಡರು. ಮೂರನೇ ಗೇಮ್‌ನಲ್ಲಿ ಅವರ ಆಟ ಸಪ್ಪೆಯಾಯಿತು. ಎದುರಾಳಿಯ ಆಕ್ರಮಣಕಾರಿ ಆಟಕ್ಕೆ ಪ್ರತ್ಯುತ್ತರ ನೀಡಲು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.