ಸೋಲ್: ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರೂ ಸೋಲೊಪ್ಪಿಕೊಂಡ ಭಾರತದ ಸೈನಾ ನೆಹ್ವಾಲ್, ಕೊರಿಯಾ ಓಪನ್ ವಿಶ್ವ ಟೂರ್ ಸೂಪರ್ 500 ಟೂರ್ನಿಯಿಂದ ಹೊರಬಿದ್ದರು. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಎದುರು 21–15, 15–21, 20–22 ರಿಂದ ಸೋತರು.
ಐದನೇ ಶ್ರೇಯಾಂಕಿತೆ ಸೈನಾ ಮತ್ತು ಮೂರನೇ ಶ್ರೇಯಾಂಕಿತೆ ಒಕುಹರಾ ನಡುವಿನ ಪಂದ್ಯ ಕುತೂಹಲ ಕೆರಳಿಸಿತ್ತು. ಈ ಹಿಂದೆ ಒಂಬತ್ತು ಬಾರಿ ಮುಖಾಮುಖಿಯಾಗಿದ್ದಾಗ ಸೈನಾ ಏಳು ಬಾರಿ ಗೆದ್ದಿದ್ದರು. ಇತ್ತೀಚಿನ ಎರಡು ಪಂದ್ಯಗಳಲ್ಲಿ ಸತತವಾಗಿ ಒಕುಹರಾಗೆ ಮಣಿದಿದ್ದ ಸೈನಾ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿ ಕಣಕ್ಕೆ ಇಳಿದಿದ್ದರು.
ಮೊದಲ ಗೇಮ್‌ನಲ್ಲಿ ಒಕುಹರಾ 3–0 ಮುನ್ನಡೆಯೊಂದಿಗೆ ಉತ್ತಮ ಆರಂಭ ಕಂಡರು. ಸೈನಾ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿ 6–6ರಿಂದ ಸಮಬಲ ಸಾಧಿಸಿದರು. ನಂತರ ಅಮೋಘ ಆಟದ ಮೂಲಕ ಗೇಮ್ ಗೆದ್ದರು.
ಮತ್ತೆ ಉತ್ತಮ ಆರಂಭ ಕಂಡ ಒಕುಹರಾ: ಎರಡನೇ ಗೇಮ್‌ನಲ್ಲೂ ಒಕುಹರಾ ಉತ್ತಮ ಆರಂಭದೊಂದಿಗೆ 4–1ರಿಂದ ಮುನ್ನಡೆದರು. ನಂತರ 6–6 ಮತ್ತು 8–8ರಿಂದ ಪಂದ್ಯ ಸಮವಾಯಿತು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ಒಕುಹರಾ ಗೇಮ್ ಗೆದ್ದು ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದರು.
ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಸೈನಾ 4–1ರ ಮುನ್ನಡೆಯೊಂದಿಗೆ ಭರವಸೆ ಮೂಡಿಸಿದರು. ನಂತರ ಒಕುಹರಾ ಆಕ್ರಮಣಕ್ಕೆ ಮುಂದಾದರು. ಹೀಗಾಗಿ ಪಂದ್ಯ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ವಿರಾಮದ ನಂತರ ಸತತ ಐದು ಪಾಯಿಂಟ್ ಕಲೆ ಹಾಕಿದ ಸೈನಾ 16–10ರಿಂದ ಮುನ್ನಡೆದು ಸೆಮಿಫೈನಲ್‌ಗೆ ಲಗ್ಗೆ ಇರಿಸುವ ನಿರೀಕ್ಷೆ ಮೂಡಿಸಿದರು. ನಂತರವೂ ಅಮೋಘ ಆಟವಾಡಿ ಮುನ್ನಡೆಯನ್ನು 20–16ಕ್ಕೆ ಏರಿಸಿದರು. ಆದರೆ ಜಪಾನ್ ಆಟಗಾರ್ತಿ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ನಿರ್ಣಾಯಕ ಹಂತದಲ್ಲಿ ಅಚ್ಚರಿಯ ಆಟವಾಡಿ ಆರು ಪಾಯಿಂಟ್‌ಗಳನ್ನು ಕಲೆ ಹಾಕಿದ ಅವರು ಗೆಲುವಿನ ಕೇಕೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.