ಬಾಸೆಲ್: ಭಾರತದ ಪಿ.ವಿ.ಸಿಂಧು ಮತ್ತು ಎಚ್.ಎಸ್ ಪ್ರಣಯ್ ಅವರು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯಗಳಲ್ಲಿ ಅವರು ನೇರ ಗೇಮ್‌ಗಳಿಂದ ಜಯ ಸಾಧಿಸಿದರು. ಥಾಯ್ಲೆಂಡ್‌ನ ಶ್ರೇಯಾಂಕ ರಹಿತ ಆಟಗಾರ್ತಿ ಸುಪನಿಡ ಕಟೆತಾಂಗ್ ಸೆಮಿಫೈನಲ್‌ನಲ್ಲಿ ಸಿಂಧು ಎದುರಾಳಿ.
ಎರಡನೇ ಶ್ರೇಯಾಂಕಿತೆ ಸಿಂಧು ಕೆನಡಾದ ಮಿಚೆಲಿ ಲೀ ಎದುರು 21-10, 21-19ರಲ್ಲಿ ಗೆಲುವು ದಾಖಲಿಸಿದರು. 36 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತ್ತು. ಭಾರತದವರೇ ಆದ ಪರುಪಳ್ಳಿ ಕಶ್ಯಪ್ ವಿರುದ್ಧ 43 ನಿಮಿಷಗಳ ಹಣಾಯಣಿಯಲ್ಲಿ ಪ್ರಣಯ್ 21-16, 21-16ರಲ್ಲಿ ಗೆದ್ದರು.
ಸೈನಾ ನೆಹ್ವಾಲ್‌ಗೆ ಸೋಲು: ತಮಗಿಂತ ಕಡಿಮೆ ರ‍್ಯಾಂಕಿಂಗ್‌ನ ಆಟಗಾರ್ತಿಯ ಎದುರು ನೀರಸ ಆಟವಾಡಿದ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಬಿದ್ದರು. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮಲೇಷ್ಯಾದ ಕಿಸೋನ ಸೆಲ್ವದುರೆ 17–21, 21–13, 21–13ರಲ್ಲಿ ನೆಹ್ವಾಲ್ ಅವರನ್ನು ಮಣಿಸಿದರು.
ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ನೆಹ್ವಾಲ್ ಮೊದಲ ಗೇಮ್‌ನಲ್ಲಿ ಪ್ರಯಾಸದಿಂದ ಗೆದ್ದರು. ಆದರೆ 64ನೇ ರ‍್ಯಾಂಕಿಂಗ್‌ನ ಎದುರಾಳಿ ಮುಂದಿನ ಎರಡು ಗೇಮ್‌ಗಳಲ್ಲಿ ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.