ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಶ್ರೀಕಾಂತ್‌

ಪಿಟಿಐ
Published 20 ಅಕ್ಟೋಬರ್ 2018, 18:48 IST
Last Updated 20 ಅಕ್ಟೋಬರ್ 2018, 18:48 IST
ಗ್ರೆಗೋರಿಯಾ ಎದುರಿನ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಗ್ರೆಗೋರಿಯಾ ಎದುರಿನ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌ ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಒಡೆನ್ಸ್‌: ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೈನಾ ನೆಹ್ವಾಲ್‌, ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಕಿದಂಬಿ ಶ್ರೀಕಾಂತ್‌ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಸೈನಾ 21–11, 21–12 ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಗ್ರೆಗೋರಿಯಾ ತುಂಜಂಗ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 30 ನಿಮಿಷಗಳಲ್ಲಿ ಮುಗಿಯಿತು.

ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸೈನಾ, ಚೀನಾ ತೈಪೆಯ ತೈ ಜು ಯಿಂಗ್‌ ವಿರುದ್ಧ ಸೆಣಸಲಿದ್ದಾರೆ. ಈ ಹೋರಾಟ ಭಾನುವಾರ ನಡೆಯಲಿದೆ.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯಿಂಗ್‌, ಸೈನಾ ಎದುರು 12–5ರ ಗೆಲುವಿನ ದಾಖಲೆ ಹೊಂದಿದ್ದಾರೆ. 2013ರಲ್ಲಿ ಭಾರತದ ಆಟಗಾರ್ತಿ ಕೊನೆಯ ಬಾರಿಗೆ ಯಿಂಗ್‌ ಅವರನ್ನು ಮಣಿಸಿದ್ದರು. ನಂತರ ನಡೆದ 10 ಹೋರಾಟಗಳಲ್ಲೂ ಚೀನಾ ತೈಪೆಯ ಆಟಗಾರ್ತಿ ಮೇಲುಗೈ ಸಾಧಿಸಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸೈನಾ, ಗ್ರೆಗೋರಿಯಾ ಎದುರಿನ ಹೋರಾಟವನ್ನು ಏಕಪಕ್ಷೀಯವಾಗಿ ಗೆದ್ದರು.

ಮೊದಲ ಗೇಮ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಭಾರತದ ಆಟಗಾರ್ತಿ ನಿರಂತರವಾಗಿ ಪಾಯಿಂಟ್ಸ್‌ ಹೆಕ್ಕಿ 10–4ರ ಮುನ್ನಡೆ ಗಳಿಸಿದರು. ನಂತರವೂ ಮಿಂಚಿನ ಆಟ ಆಡಿ ಮುನ್ನಡೆಯನ್ನು 17–8ಕ್ಕೆ ಹೆಚ್ಚಿಸಿಕೊಂಡರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಇಂಡೊನೇಷ್ಯಾದ ಆಟಗಾರ್ತಿ 13ನೇ ನಿಮಿಷದಲ್ಲಿ ಸೋಲೊಪ್ಪಿಕೊಂಡರು.

ಎರಡನೇ ಗೇಮ್‌ನಲ್ಲೂ ಸೈನಾ ಆಟ ಕಳೆಗಟ್ಟಿತು. ಭಾರತದ ಆಟಗಾರ್ತಿ 7–3ರಿಂದ ಮುನ್ನಡೆ ಪಡೆದರು. ಈ ಹಂತದಲ್ಲಿ ಗ್ರೆಗೋರಿಯಾ ಮಿಂಚಿದರು. ಸತತ ನಾಲ್ಕು ಪಾಯಿಂಟ್ಸ್‌ ಗಳಿಸಿ 7–7ರಲ್ಲಿ ಸಮಬಲ ಮಾಡಿಕೊಂಡರು.

ನಂತರ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಹೊಂದಿರುವ ಸೈನಾ ದ್ವಿತೀಯಾರ್ಧದಲ್ಲಿ ಅಬ್ಬರಿಸಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಅವರು ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ಶ್ರೀಕಾಂತ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌ 16–21, 12–21ರಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಎದುರು ಶರಣಾದರು.42 ನಿಮಿಷಗಳ ಈ ಹೋರಾಟದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಂಟೊ ಪ್ರಾಬಲ್ಯ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.