ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ನಲ್ಲಿ ಸೋತ ಸೈನಾ

ತೈ ಜು ಯಿಂಗ್‌ಗೆ ಪ್ರಶಸ್ತಿ

ಪಿಟಿಐ
Published 21 ಅಕ್ಟೋಬರ್ 2018, 15:37 IST
Last Updated 21 ಅಕ್ಟೋಬರ್ 2018, 15:37 IST
ಸೈನಾ ನೆಹ್ವಾಲ್‌ ಆಟದ ವೈಖರಿ –ಎಪಿ/ಪಿಟಿಐ ಚಿತ್ರ
ಸೈನಾ ನೆಹ್ವಾಲ್‌ ಆಟದ ವೈಖರಿ –ಎಪಿ/ಪಿಟಿಐ ಚಿತ್ರ   

ಒಡೆನ್ಸ್‌: ಭಾರತದ ಸೈನಾ ನೆಹ್ವಾಲ್‌, ಚೀನಾ ತೈಪೆಯ ತೈ ಜು ಯಿಂಗ್‌ ಸವಾಲು ಮೀರಿ ನಿಲ್ಲುವಲ್ಲಿ ಮತ್ತೊಮ್ಮೆ ವಿಫಲರಾದರು. ಹೀಗಾಗಿ ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವರ ಕನಸು ಕೈಗೂಡಲಿಲ್ಲ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 13–21, 21–13, 6–21ರಲ್ಲಿ ಸೋತ ಸೈನಾ ರನ್ನರ್‌ ಅಪ್‌ ಆದರು. ಈ ಹೋರಾಟ 52 ನಿಮಿಷ ನಡೆಯಿತು.

ಇದರೊಂದಿಗೆ ಯಿಂಗ್‌, ಭಾರತದ ಆಟಗಾರ್ತಿಯ ಎದುರಿನ ಜಯದ ದಾಖಲೆಯನ್ನು 13–5ಕ್ಕೆ ಹೆಚ್ಚಿಸಿಕೊಂಡರು. ಈ ವರ್ಷ ತೈ ಜು ವಿರುದ್ಧ ಸೈನಾ ಸೋತ ಸತತ ಐದನೇ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಇಂಡೊನೇಷ್ಯಾ ಮಾಸ್ಟರ್ಸ್‌, ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌, ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್‌ ಕ್ರೀಡಾಕೂಟದಲ್ಲಿ ಸೈನಾ ಪರಾಭವಗೊಂಡಿದ್ದರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯಿಂಗ್‌ ಮೊದಲ ಗೇಮ್‌ನಲ್ಲಿ ಅಬ್ಬರಿಸಿದರು. ಚುರುಕಿನ ಸರ್ವ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು 6–1ರ ಮುನ್ನಡೆ ಗಳಿಸಿದರು. ನಂತರ ದೀರ್ಘ ರ‍್ಯಾಲಿಗಳನ್ನು ಆಡಿ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದ ಯಿಂಗ್‌ ಮುನ್ನಡೆಯನ್ನು 11–6ಕ್ಕೆ ಹೆಚ್ಚಿಸಿಕೊಂಡರು. ವಿರಾಮದ ಬಳಿಕವೂ ಮಿಂಚಿನ ಆಟ ಆಡಿ 15ನೇ ನಿಮಿಷದಲ್ಲಿ ಗೇಮ್‌ ಕೈವಶ ಮಾಡಿಕೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಸೈನಾ ಎರಡನೇ ಗೇಮ್‌ನಲ್ಲಿ ಮೋಡಿ ಮಾಡಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಭಾರತದ ಆಟಗಾರ್ತಿ 11–5ರಲ್ಲಿ ಮುನ್ನಡೆ ಗಳಿಸಿದರು.

ಆರಂಭಿಕ ಗೇಮ್‌ನ ಬಳಿಕ ಭಾವಿ ಪತಿ ಪರುಪಳ್ಳಿ ಕಶ್ಯಪ್‌ ಅವರಿಂದ ಕೆಲ ಸಲಹೆಗಳನ್ನು ಪಡೆದ ಸೈನಾ, ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ಹೆಚ್ಚು ಒತ್ತು ನೀಡಿದರು. ಈ ಮೂಲಕ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಳ್ಳುತ್ತಾ ಸಾಗಿದ ಅವರು ನಿರಾಯಾಸವಾಗಿ ಗೇಮ್‌ ಜಯಿಸಿ 1–1ರಲ್ಲಿ ಸಮಬಲ ಸಾಧಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಸಂಪೂರ್ಣವಾಗಿ ಮಂಕಾದರು. ಪದೇ ಪದೇ ತಪ್ಪುಗಳನ್ನು ಮಾಡಿದ ಸೈನಾ, ಎದುರಾಳಿಗೆ ಸುಲಭವಾಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಇದು ಅವರಿಗೆ ಮುಳುವಾಯಿತು.

ಆರಂಭದಲ್ಲಿ 9–2ರಿಂದ ಮುಂದಿದ್ದ ಯಿಂಗ್‌ ನಂತರವೂ ಸೊಗಸಾದ ಆಟ ಆಡಿ ಭಾರತದ ಆಟಗಾರ್ತಿಯ ಸವಾಲು ಮೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.