ಭಾ ರತದ ಬ್ಯಾಡ್ಮಿಂಟನ್ ಕ್ಷೇತ್ರದ ಮೇಲೆ ಕೆಲವು ತಿಂಗಳಿಂದ ನಿರಾಸೆಯ ಕಾರ್ಮೋಡ ಕವಿದಿದೆ. ದಿಗ್ಗಜ ಆಟಗಾರರು ಜಿದ್ದಿಗೆ ಬಿದ್ದವರಂತೆ ಪ್ರಮುಖ ಟೂರ್ನಿಗಳ ಆರಂಭಿಕ ಘಟ್ಟದಿಂದಲೇ ನಿರ್ಗಮಿಸುತ್ತಿದ್ದಾರೆ. ಮಹಿಳೆಯರ ಪೈಕಿ ಪಿ.ವಿ.ಸಿಂಧು ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದರು. ಆದರೆ ನಂತರ ‘ಚಾಂಪಿಯನ್’ ಆಟವಾಡಲು ವಿಫಲರಾದರು. ಸತತ ಸೋಲಿನಿಂದ ಕಂಗೆಟ್ಟಿರುವ ಅವರು ಕಳೆದ ವಾರ ನಡೆದ ಕೊರಿಯಾ ಓಪನ್‌ನಲ್ಲಿ ಕಣಕ್ಕೇ ಇಳಿಯಲಿಲ್ಲ!
ಪುರುಷರ ಪೈಕಿ ವಿಶ್ವದ ಮಾಜಿ ಒಂದನೇ ನಂಬರ್ ಆಟಗಾರ ಕಿದಂಬಿ ಶ್ರೀಕಾಂತ್ ಈ ವರ್ಷ ಒಂದೇ ಒಂದು ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿಲ್ಲ. ಪರುಪಳ್ಳಿ ಕಶ್ಯಪ್ ಅವರಂಥ ಹಿರಿಯ ಆಟಗಾರರಂತೂ ಸತತ ನಿರಾಸೆಯನ್ನೇ ಕಂಡಿದ್ದಾರೆ. ಮಹಿಳೆಯರ ಪೈಕಿ ಸೈನಾ ನೆಹ್ವಾಲ್ ಗಾಯದ ಸಮಸ್ಯೆಗಳಿಂದ ಬಳಲುತ್ತಲೇ ವರ್ಷ ಕಳೆದಿದ್ದಾರೆ. ಈ ನಡುವೆ ಸಮೀರ್ ವರ್ಮಾ, ಎಚ್.ಎಸ್.ಪ್ರಣಯ್, ಸಾಯಿ ಪ್ರಣೀತ್ ಮುಂತಾದವರು ಆಗೊಮ್ಮೆ ಈಗೊಮ್ಮೆ ಭರವಸೆ ಮೂಡಿಸಿದ್ದಾರೆ. ಆದರೂ ಬ್ಯಾಡ್ಮಿಂಟನ್ ಆಡುವ ವಿಶ್ವದ ಪ್ರಮುಖ ರಾಷ್ಟ್ರಗಳ ಆಟಗಾರರ ಮುಂದೆ ಭಾರತದ ಸವಾಲನ್ನು ಮುನ್ನಡೆಸಲು ಅವರಿಗೂ ಆಗಲಿಲ್ಲ. ಡಬಲ್ಸ್‌ನಲ್ಲೂ ಭಾರತದ ಸಾಧನೆ ಹೇಳಿಕೊಳ್ಳುವಂತಿಲ್ಲ. ಆದರೆ ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಅವರು ಆಶಾಕಿರಣ ಮೂಡಿಸಿದ್ದಾರೆ. ಬ್ರೆಜಿಲ್ ಇಂಟರ್‌ನ್ಯಾಷನಲ್ ಚಾಲೆಂಜ್ ಮತ್ತು ಥಾಯ್ಲೆಂಡ್ ಓಪನ್‌ನ ಪ್ರಶಸ್ತಿ ಗೆದ್ದಿರುವ ಇವರಿಬ್ಬರು ತಲಾ ಎರಡು ಫೈನಲ್, ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್‌ಗಳನ್ನೂ ಆಡಿ ಭಾರತದ ತಾಕತ್ತು ತೋರಿಸಿದ್ದಾರೆ. ಇದೀಗ ಈ ವರ್ಷದ ಕೊನೆಯ ಮಹತ್ವದ ಟೂರ್ನಿಯಾದ ಸೈಯದ್ ಮೋದಿ ಚಾಂಪಿಯನ್‌ಷಿಪ್‌ಗೆ ಭಾರತದ ಬ್ಯಾಡ್ಮಿಂಟನ್ ತಾರೆಯರು ಸಜ್ಜಾಗಿದ್ದಾರೆ. ತವರಿನಲ್ಲೇ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಏಳುವವರು ಯಾರು ಮತ್ತು ಬೀಳುವವರು ಯಾರ್ಯಾರು ಎಂಬ ಕುತೂಹಲ ಬ್ಯಾಡ್ಮಿಂಟನ್ ಪ್ರಿಯರಲ್ಲಿ ಗರಿಗೆದರಿದೆ.
ಟೂರ್ನಿಗಳ ‘ಭಾರ’ ಅಧಿಕವಾಯಿತೇ?
ಕಳೆದ ವರ್ಷ ನಿಯಮಗಳನ್ನು ಪರಿಷ್ಕರಿಸಿದ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಪ್ರಮುಖ ಆಟಗಾರರು ಪ್ರತಿ ಋತುವಿನಲ್ಲಿ ಕನಿಷ್ಠ 12 ಮಹತ್ವದ ಟೂರ್ನಿಗಳಲ್ಲಿ ಆಡುವುದು ಕಡ್ಡಾಯ ಮಾಡಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದರೂ ಆಲ್ ಇಂಗ್ಲೆಂಡ್ ಟೂರ್ನಿಯಿಂದ ಅದು ಜಾರಿಗೆ ಬಂದಿತು. ಇದರ ನಂತರ ಆಟಗಾರರು ಅಧಿಕ ಭಾರದಿಂದ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ದೂರು ಪದೇ ಪದೇ ಕೇಳಿಬರುತ್ತಿದೆ. ಭಾರತದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಕಳೆದ ವಾರ ಈ ಬಗ್ಗೆ ಮುಕ್ತವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ನಿಯಮ ಎಲ್ಲರಿಗೂ ಅನ್ವಯ ಆಗುತ್ತದೆ ಎಂಬುದು ಮರೆಯುವಂತಿಲ್ಲ. ಬೇರೆ ದೇಶಗಳ ಪ್ರಮುಖ ಆಟಗಾರರೆಲ್ಲರೂ ನಿಯಮವನ್ನು ಪಾಲಿಸುತ್ತಲೇ ಪದೇ ಪದೇ ಚಾಂಪಿಯನ್ ಆಗುತ್ತಿದ್ದಾರೆ. ಹಾಗಿದ್ದರೆ ಭಾರತದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಕಾಡಿರುವ ಸಮಸ್ಯೆ ಏನು...? ಉತ್ತರ ಕಂಡುಕೊಳ್ಳುವುದರೊಂದಿಗೆ ಸಾಮರ್ಥ್ಯ ವೃದ್ಧಿಯ ಕಡೆಗೂ ಗಮನ ನೀಡಬೇಕಾದ ಕಾಲ ಸಮೀಪಿಸಿದೆ.
ಪಿ.ವಿ.ಸಿಂಧು
ವಯಸ್ಸು 24 ವರ್ಷ
ಪಿ.ವಿ.ಸಿಂಧು ಆಗಸ್ಟ್ 25ರಂದು ಜಪಾನ್‌ನ ನೊಜೊಮಿ ಒಕುಹರ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ ಆದ ನಂತರ ನೀರಸ ಪ್ರದರ್ಶನ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಉಳಿದ ಎಲ್ಲ ಟೂರ್ನಿಗಳಲ್ಲೂ ಮೊದಲ ಎರಡು ಸುತ್ತುಗಳಲ್ಲೇ ಸುಸ್ತು ಹೊಡೆದು ವಾಪಸಾಗಿದ್ದಾರೆ. ಹಾಗೆ ನೋಡಿದರೆ ಸಿಂಧು ಈ ವರ್ಷದ ಜನವರಿಯಿಂದಲೇ ದೊಡ್ಡ ಸಾಧನೆಯನ್ನೇನೂ ಮಾಡಿರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ಗೂ ಮೊದಲು ಅವರು 10 ಟೂರ್ನಿಗಳಲ್ಲಿ ಸ್ಪರ್ಧಿಸಿದ್ದಾರೆ. ಇಂಡೊನೇಷ್ಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದದ್ದು ಬಿಟ್ಟರೆ ಉಳಿದ ಟೂರ್ನಿಗಳ ಪೈಕಿ ಎರಡರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದೇ ಗರಿಷ್ಠ ಸಾಧನೆಯಾಗಿತ್ತು. ಏಷ್ಯಾ ಚಾಂಪಿಯನ್‌ಷಿಪ್ ನಲ್ಲೂ ಅವರ ಆಟ ಎಂಟರ ಘಟ್ಟದಲ್ಲಿ ಮುಕ್ತಾಯಗೊಂಡಿತ್ತು. ಸ್ಪೇನ್‌ನ ಕರೊಲಿನಾ ಮರಿನ್ ಹೊರತುಪಡಿಸಿದರೆ ಉಳಿದಂತೆ ಎಲ್ಲ ಟೂರ್ನಿಗಳಲ್ಲೂ ಸಿಂಧುಗೆ ಏಷ್ಯಾದ ಆಟಗಾರ್ತಿಯರೇ ಅಡ್ಡಗೋಡೆಯಾಗಿರುವುದು ವಿಶೇಷ.
ವಿಶ್ವ ರಾಂಕಿಂಗ್ 6
ವೃತ್ತಿ ಜೀವನದ ಸಾಧನೆ
ಒಟ್ಟು ಪಂದ್ಯ 457
ಜಯ 322
ಸೋಲು 135
2019ರ ಸಾಧನೆ
ಪಂದ್ಯಗಳು 44
ಗೆಲುವು 29
ಸೋಲು 15
**
ಸೈನಾ ನೆಹ್ವಾಲ್
ವಯಸ್ಸು 29 ವರ್ಷ
ಸಿಂಧುಗೆ ಹೋಲಿಸಿದರೆ ಸೈನಾ ನೆಹ್ವಾಲ್ ಈ ವರ್ಷ ಆಡಿದ ಪಂದ್ಯಗಳ ಸಂಖ್ಯೆ ಕಡಿಮೆ. ಗಾಯದ ಸಮಸ್ಯೆಯ ನಡುವೆಯೇ ಆಡಿದ ಅವರು ಕೆಲವು ಪಂದ್ಯಗಳಲ್ಲಿ ಅರ್ಧದಿಂದ ನಿವೃತ್ತರಾದದ್ದೂ ಇದೆ. ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಿಂದ 3ನೇ ಸುತ್ತಿನಲ್ಲೇ ಹೊರಬಿದ್ದಿದ್ದ ಅವರು ಇಂಡೊನೇಷ್ಯಾ ಮಾಸ್ಟರ್ಸ್ ನ ಫೈನಲ್‌ನಲ್ಲಿ ಕೇವಲ 10 ನಿಮಿಷ ಆಡಿ ಹೊರ ನಡೆದಿದ್ದರು.ಕರೊಲಿನಾ ಮರಿನ್ ಮತ್ತು ಡೆನ್ಮಾರ್ಕ್‌ನ ಬಿಚ್ ಫೆಲ್ಟ್ ಹೊರತುಪಡಿಸಿದರೆ ಸೈನಾಗೂ ಹೆಚ್ಚು ಅಪಾಯ ಎದುರಾರದ್ದು ಏಷ್ಯಾದ ಆಟಗಾರ್ತಿಯರಿಂದಲೇ.
ವಿಶ್ವ ರಾಂಕಿಂಗ್ 9
ವೃತ್ತಿ ಜೀವನದ ಸಾಧನೆ
ಒಟ್ಟು ಪಂದ್ಯ 620
ಜಯ 429
ಸೋಲು 191
2019ರ ಸಾಧನೆ
ಪಂದ್ಯಗಳು 33
ಗೆಲುವು 18
ಸೋಲು 15
***
ಕಿದಂಬಿ ಶ್ರೀಕಾಂತ್
ವಯಸ್ಸು 26 ವರ್ಷ
ಕಿದಂಬಿ ಶ್ರೀಕಾಂತ್ ಈ ಬಾರಿ ಸತತ ನಿರಾಸೆ ಕಂಡಿದ್ದಾರೆ. 15 ಟೂರ್ನಿಗಳ ಪೈಕಿ ಇಂಡಿಯಾ ಓಪನ್‌ನಲ್ಲಿ ಮಾತ್ರ ಫೈನಲ್ ಪ್ರವೇಶಿಸಿದ್ದರು. ಅಲ್ಲಿ ವಿಕ್ಟರ್ ಅಕ್ಸೆಲ್ಸನ್‌ಗೆ ಮಣಿದಿದ್ದರು. 5 ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ್ದಾರೆ. ನವೆಂಬರ್ 17ರಂದು ಕೊನೆಗೊಂಡ ಹಾಂಗ್‌ಕಾಂಕ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಈ ವರ್ಷದ ಎರಡನೇ ಅತಿದೊಡ್ಡ ಸಾಧನೆ. ಜಪಾನ್, ಚೀನಾ, ಇಂಡೊನೇಷ್ಯಾ, ಚೀನಾ ಥೈಪೆ ಮತ್ತು ದಕ್ಷಿಣ ಕೊರಿಯಾದ ಆಟಗಾರರು ಕಿದಂಬಿ ಅವರನ್ನು ಹೆಚ್ಚಾಗಿ ಕಾಡಿದ್ದಾರೆ. ಡೆನ್ಮಾರ್ಕ್ ನ ಅಕ್ಸೆಲ್ಸನ್ ಸವಾಲನ್ನೂ ಮೀರಲು ಭಾರತದ ಈ ಆಟಗಾರನಿಗೆ ಸಾಧ್ಯವಾಗಲಿಲ್ಲ.
ವಿಶ್ವ ರಾಂಕಿಂಗ್ 11
ವೃತ್ತಿ ಜೀವನದ ಸಾಧನೆ
ಒಟ್ಟು ಪಂದ್ಯ 346
ಜಯ 230
ಸೋಲು 116
2019ರ ಸಾಧನೆ
ಪಂದ್ಯಗಳು 34
ಗೆಲುವು 20
ಸೋಲು 14
***
ಪರುಪಳ್ಳಿ ಕಶ್ಯಪ್
ವಯಸ್ಸು 33 ವರ್ಷ
ಪರುಪಳ್ಳಿ ಕಶ್ಯಪ್ ಗಪ್ ಚುಪ್ ಎಂದು ಈ ಬಾರಿ 20 ಟೂರ್ನಿಗಳನ್ನು ಆಡಿದ್ದಾರೆ. ಕೆನಡಾ ಓಪನ್‌ನಲ್ಲಿ ಫೈನಲ್ ವರೆಗೂ ಪ್ರವೇಶಿಸಿದ್ದಾರೆ. ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದ ಅವರು ಉಳಿದ ಎಲ್ಲ ಟೂರ್ನಿಗಳಲ್ಲೂ ಮೊದಲ ಅಥವಾ ಎರಡನೇ ಸುತ್ತಿನಲ್ಲೇ ಸೋಲುಂಡು ವಾಪಸಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕೇ ಇಳಿಯಲಿಲ್ಲ ಎಂಬುದು ಗಮನಾರ್ಹ ಅಂಶ. ಇಂಡೊನೇಷ್ಯಾ, ಸಿಂಗಪುರ, ಚೀನಾ ಥೈಪೆ, ಜಪಾನ್ ಮತ್ತು ಚೀನಾದ ಆಟಗಾರರ ಮುಂದೆ ಮಂಡಿಯೂರಿರುವ ಕಶ್ಯಪ್ ಅವರು ವಿಕ್ಟರ್ ಅಕ್ಸೆಲ್ಸನ್‌ಗೆ ಎರಡು ಬಾರಿ ಮಣಿದಿದ್ದಾರೆ. ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲೇ ಭಾರತದ ಲಕ್ಷ್ಯ ಸೇನ್ ವಿರುದ್ಧವೇ ಸೋತು ಹೊರಬಿದ್ದಿದ್ದರು.
ವಿಶ್ವ ರಾಂಕಿಂಗ್ 25
ವೃತ್ತಿ ಜೀವನದ ಸಾಧನೆ
ಒಟ್ಟು ಪಂದ್ಯ 513
ಜಯ 300
ಸೋಲು 213
2019ರ ಸಾಧನೆ
ಪಂದ್ಯಗಳು 45
ಗೆಲುವು 26
ಸೋಲು 19
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.