ADVERTISEMENT

ಸೈನಾ ನೆಹ್ವಾಲ್‌ ನಿವೃತ್ತಿ ಮುನ್ಸೂಚನೆ

ಪಿಟಿಐ
Published 2 ಸೆಪ್ಟೆಂಬರ್ 2024, 13:49 IST
Last Updated 2 ಸೆಪ್ಟೆಂಬರ್ 2024, 13:49 IST
ಸೈನಾ ನೆಹ್ವಾಲ್‌ –ಪಿಟಿಐ ಚಿತ್ರ
ಸೈನಾ ನೆಹ್ವಾಲ್‌ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಅನುಭವಿ ಬ್ಯಾಡ್ಮಿಂಟನ್‌ ಆಟಗಾರ್ತಿ, ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ತಾವು ಸಂಧಿವಾತದಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ಈ ಸಮಸ್ಯೆಯಿಂದ ತಮಗೆ ಎಂದಿನಂತೆ ತರಬೇತಿಗೆ ಸಮಯ ನೀಡುವುದು ಅಸಾಧ್ಯವಾಗಲಿದೆ. ಹೀಗಾಗಿ ವರ್ಷಾಂತ್ಯದೊಳಗಾಗಿ ತಮ್ಮ ಕ್ರೀಡಾ ಭವಿಷ್ಯದ ಕುರಿತು ನಿರ್ಧಾರಕ್ಕೆ ಬರುವುದಾಗಿ 34 ವರ್ಷದ ಆಟಗಾರ್ತಿ ಹೇಳಿದ್ದಾರೆ. 

2012ರ ಲಂಡನ್‌ ಕೂಟದಲ್ಲಿ ಕಂಚಿನ ಪದಕದೊಂದಿಗೆ ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್‌ ತಾರೆ ಎನಿಸಿರುವ ಸೈನಾ, ಗಾಯದ ಸಮಸ್ಯೆ  ಎದುರಾಗುವ ಮೊದಲು ಮೂರು ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದರು.

ADVERTISEMENT

2010 ಮತ್ತು 2018ರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಪದಕ ವಿಜೇತೆಯಾಗಿರುವ ಸೈನಾ, ತಮ್ಮ ಕ್ರೀಡಾಜೀವನ ಅಂತಿಮ ಹಂತದಲ್ಲಿದೆ ಎಂಬುದನ್ನು ಕಡೆಗಣಿಸಲಾಗದು ಎಂದಿದ್ದಾರೆ.

'ಮೊಣಗಂಟಿನ ಸ್ಥಿತಿ ಉತ್ತಮವಾಗಿಲ್ಲ. ನನಗೆ ಸಂಧಿವಾತವಿದೆ. ಕಾರ್ಟಿಲೆಜ್ (ಮೃದ್ವಸ್ಥಿ) ಸುಸ್ಥಿತಿಯಲ್ಲಿಲ್ಲ. ಎಂಟು-ಒಂಬತ್ತು ಗಂಟೆ ಅಭ್ಯಾಸಕ್ಕೆ ನೀಡುವುದು ಕಷ್ಟ’ ಎಂದು ಅವರು, ಗಗನ್ ನಾರಂಗ್ ನಡೆಸಿಕೊಟ್ಟ 'ಹೌಸ್ ಆಫ್ ಗ್ಲೋರಿ' ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದರು.

ಒಂದು ವರ್ಷದಿಂದ ಅವರು ಆಡುತ್ತಿಲ್ಲ. ಕಳೆದ ವರ್ಷ ಅವರು ಸಿಂಗಪುರ ಓಪನ್‌ನಲ್ಲಿ ಕೊನೆಯ ಬಾರಿ ಕಣಕ್ಕಿಳಿದಿದ್ದು, ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಪದ್ಮಶ್ರೀ ಪುರಸ್ಕೃತರಾಗಿರುವ ಅವರು ಬಿಜೆಪಿ ಸದಸ್ಯೆ ಆಗಿದ್ದಾರೆ.

‘ನಾನು ಯಶಸ್ಸಿನ ಓಟ ಹೆಮ್ಮೆಯಿಂದ ಹಿಂತಿರುಗಿ ನೋಡುತ್ತೇನೆ. ನಾನು ಸಾಕಷ್ಟು ಶ್ರಮ ಹಾಕಿದ್ದೇನೆ. ಮೂರು ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲದರಲ್ಲೂ ನೂರಕ್ಕೆ ನೂರರಷ್ಟು ಆಟ  ಹಾಕಿದ್ದೇನೆ. ನನಗೆ ಆ ಬಗ್ಗೆ ಹೆಮ್ಮೆಯಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.