ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕೂಟದ ಕುಸ್ತಿ ಅಖಾಡದಲ್ಲಿ ಭಾರತ ಪದಕಗಳ ಬೇಟೆಯಾಡಿದ್ದು, ಮೂರು ಚಿನ್ನ ಹಾಗೂ ಒಂದು ಬೆಳ್ಳಿಯನ್ನು ಬಗಲಿಗೆ ಹಾಕಿಕೊಂಡಿದೆ.
ಸಾಕ್ಷಿ ಮಲಿಕ್, ದೀಪಕ್ ಪೂನಿಯಾ ಮತ್ತು ಬಜರಂಗ್ ಪೂನಿಯಾ ಅವರು ಚಿನ್ನದ ನಗು ಬೀರಿದರೆ, ಅನ್ಶು ಮಲಿಕ್ ಬೆಳ್ಳಿಯ ಪದಕ ಗೆದ್ದುಕೊಂಡರು.
ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ ಕುಸ್ತಿಯ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬಜರಂಗ್ ಅವರು ಕೆನಡಾದ ಲಾಕ್ಲೆನ್ ಮೆಕ್‌ಲೀನ್ ಎದುರು 9–2 ಪಾಯಿಂಟ್‌ಗಳಿಂದ ಗೆದ್ದರು.
28 ವರ್ಷದ ಬಜರಂಗ್ ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಜಾರ್ಜ್ ರಾಮ್ ವಿರುದ್ದ 10–0 ರಲ್ಲಿ ಜಯ ಸಾಧಿಸಿದ್ದರು.
ಮೊದಲ ಸುತ್ತಿನ ಹಣಾಹಣಿಯಲ್ಲಿ ನೌರು ದ್ವೀಪದ ಲೊವ್ ಬಿಂಗ್‌ಹ್ಯಾಮ್ ಅವರನ್ನು ಮಣಿಸಿದ್ದರೆ, ಕ್ವಾರ್ಟರ್ ಫೈನಲ್‌ನಲ್ಲಿ ಮಾರಿಷಸ್‌ನ ಜೀನ್ ಗಯ್ಲಿಯಾನ್ ಜೊರಿಸ್ ಅವರನ್ನು ಪರಾಭವಗೊಳಿಸಿದ್ದರು.
ಬಜರಂಗ್ ಶುಕ್ರವಾರ ಸ್ಪರ್ಧಿಸಿದ ನಾಲ್ಕು ಬೌಟ್‌ಗಳಲ್ಲಿ ಮೂರನ್ನು ಕೂಡಾ ಮೊದಲ ಸುತ್ತಿನಲ್ಲೇ ಗೆದ್ದುಕೊಂಡರು. ತಾವು ಕಲಿತ ಎಲ್ಲ ಪಟ್ಟುಗಳನ್ನು ಸಮರ್ಥವಾಗಿ ಪ್ರಯೋಗಿಸಿ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದರು.
ಸಾಕ್ಷಿ ಮಲಿಕ್ ಅವರು ಮಹಿಳೆಯರ 62 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕೆನಡಾದ ಅನಾ ಪೌಲಾ ಗೊಡಿನೆಸ್ ಗೊನ್ಸಾಲೆಸ್ ಅವರನ್ನು ಮಣಿಸಿದರು.
ಆರಂಭದ ಎರಡು ನಿಮಿಷ ಜಿದ್ದಾಜಿದ್ದಿನ ಪೈಪೋಟಿ ನಡೆದು ಇಬ್ಬರೂ 4–4 ಪಾಯಿಂಟ್‌ಗಳಿಂದ ಸಮಬಲ ಸಾಧಿಸಿದ್ದರು. ಆ ಬಳಿಕ ಲಯ ಕಂಡುಕೊಂಡ ಸಾಕ್ಷಿ, ಎದುರಾಳಿಯನ್ನು ಚಿತ್ ಮಾಡಿ ಅಖಾಡದಲ್ಲಿ ಗೆಲುವಿನ ಸಂಭ್ರಮ ಆಚರಿಸಿದರು.
ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಕೆಲ್ಸೆ ಬಾರ್ನೆಸ್ ಎದುರು ಗೆದ್ದಿದ್ದ ಅವರು ಆ ಬಳಿಕ ಕ್ಯಾಮರೂನ್‌ನ ಬೆರ್ತ್ ಎಮಿಲಿಯೆನ್ ಅವರನ್ನು ಸೋಲಿಸಿದ್ದರು.
ಪುರುಷರ 86 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದೀಪಕ್ ಪೂನಿಯಾ ಅವರು ಪಾಕಿಸ್ತಾನದ ಮುಹಮ್ಮದ್ ಇನಾಮ್ ಎದುರು 3–0 ಪಾಯಿಂಟ್‌ಗಳಿಂದ ಗೆದ್ದರು.
ದೀಪಕ್ ಮೊದಲ ಸುತ್ತಿನಲ್ಲಿ ನ್ಯೂಜಿಲೆಂಡ್‌ನ ಮ್ಯಾಥ್ಯೂ ಕ್ಲೇ ಅವರನ್ನು ಮಣಿಸಿದ್ದರೆ, ಸೆಮಿಫೈನಲ್‌ನಲ್ಲಿ ಕೆನಡಾದ ಅಲೆಕ್ಸಾಂಡರ್ ಮೂರ್ ಎದುರು 3–1 ರಲ್ಲಿ ಜಯ ಸಾಧಿಸಿದ್ದರು.
ಅನ್ಶು ಅವರು ಮಹಿಳೆಯರ 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರು. ಫೈನಲ್‌ನಲ್ಲಿ ಅವರು 3–7 ರಲ್ಲಿ ನೈಜೀರಿಯದ ಒಡುನಯೊ ಅಡೆಕುರೆಯೊ ಎದುರು ಸೋತರು. ಆರಂಭಿಕ ಬೌಟ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ್ದರೂ, ಅಂತಿಮ ಹಣಾಹಣಿಯಲ್ಲಿ ಎಡವಿದರು.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆಗೆ, ನೈಜೀರಿಯಾದ ಸ್ಪರ್ಧಿಯ ರಕ್ಷಣೆಯನ್ನು ಭೇದಿಸಲು ಆಗಲಿಲ್ಲ.
ಅನ್ಶು ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ 10–0 ರಲ್ಲಿ ಶ್ರೀಲಂಕಾದ ನೇತಮಿ ಪೊರುತೊತಗೆ ಅವರನ್ನು ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಐರಿನಾ ಸೈಮೊನಿಡಿಸ್ ಎದುರು ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.