ನವದೆಹಲಿ: ನಿಷೇಧಿತ ಉತ್ತೇಜನ ಮದ್ದು ಸೇವನೆ ಆರೋಪದಲ್ಲಿ ಸಿಲುಕಿ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರ ಮೇಲಿನ ಶಿಕ್ಷೆಯನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಹಿಂತೆಗೆದುಕೊಂಡಿದೆ.
2017ರ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನ ಅಮೆರಿಕದಲ್ಲಿ ಚಾನು ಅವರ ಮಾದರಿಯನ್ನು ಪಡೆದುಕೊಳ್ಳಲಾಗಿತ್ತು. ಅವರು ಅನಾಬೊಲಿಕ್ ಸ್ಟಿರಾಯ್ಡ್ ಸೇವಿಸಿದ್ದರು ಎಂದು ಪರೀಕ್ಷೆಯಲ್ಲಿ ಗೊತ್ತಾಗಿತ್ತು. 2018ರ ಮಾರ್ಚ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕೂಟದ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಅವರ ಮೇಲೆ ನಿಷೇಧ ಹೇರಲಾಗಿತ್ತು. ಅವರು ತನಿಖೆಗೆ ಒತ್ತಾಯಿಸಿದ್ದರು.
‘ತನಿಖಾ ಸಮಿತಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿಯ ವರೆಗೆ ಚಾನು ಮೇಲಿನ ನಿಷೇಧವನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಫೆಡರೇಷನ್‌ನ ಕಾನೂನು ಸಲಹೆಗಾರ ಇವಾ ನೈರಿಫಾ ತಿಳಿಸಿದ್ದಾರೆ.
‘ಇದು ನನ್ನ ಪಾಲಿಗೆ ಭಾರಿ ಸಮಾಧಾನ ತಂದಿರುವ ದಿನ. ಎಂಟು ತಿಂಗಳು ತುಂಬ ನೋವು ಅನುಭವಿಸಿದ್ದೆ. ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗದೆ ಬೇಸರಗೊಂಡಿದ್ದೆ’ ಎಂದು ಸಂಜಿತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.