ಮೆಲ್ಬರ್ನ್: ಭಾರತದ ಜಿ.ಸತ್ಯನ್ ಹಾಗೂ ಅಂಥೋನಿ ಅಮಲ್‌ರಾಜ್ ಜೋಡಿಯು ವರ್ಲ್ಡ್ ಟೂರ್ ಪ್ಲಾಟಿನಂ ಆಸ್ಟ್ರೇಲಿಯಾ ಓಪನ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆಟಗಾರರು, ಅಗ್ರ ಶ್ರೇಯಾಕದ ಜೋಡಿ ಕೊರಿಯಾದ ಜಿಯೊಂಗ್ ಯಂಗ್‌ಸಿಕ್ ಹಾಗೂ ಲೀ ಸಾಂಗ್ಸು ವಿರುದ್ಧ 12–14, 9–11, 8–11ರಿಂದ ಸೋಲುಂಡರು.
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತ ಪದಕದ ಸಾಧನೆ ಮಾಡಿದೆ. ಮೊದಲ ಗೇಮ್‌ನಲ್ಲಿ ಭಾರತದ ಆಟಗಾರರು ಭಾರೀ ಪೈಪೋಟಿ ನೀಡಿದರು. ಅದೇ ಲಯವನ್ನು ಕಾಪಾಡಿಕೊಳ್ಳದ ಭಾರತದ ಜೋಡಿ ಸೋಲಿಗೆ ಶರಣಾಯಿತು. ಆದರೆ ಹೋರಾಟವನ್ನಂತೂ ನೀಡಿತು.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರರು ಕೊರಿಯಾದ ಮತ್ತೊಂದು ಜೋಡಿಯನ್ನು ಹಿಮ್ಮೆಟ್ಟಿಸಿದ್ದರು. ಜಾಂಗ್ ವೂಜಿನ್ ಹಾಗೂ ಲಿಮ್ ಜೊಂಗೂನ್ ಎದುರು 5–11, 11–6, 14–12, 11–8 ಗೇಮ್‌ಗಳಿಂದ ಜಯದ ನಗೆ ಬೀರಿದ್ದರು.
ಇತರ ವಿಭಾಗಗಳಲ್ಲಿ ಭಾರತೀಯ ಆಟಗಾರರು ವೈಫಲ್ಯ ಕಂಡರು. ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಿದ್ದ ಸತ್ಯನ್ ಮತ್ತು ಶರತ್ ಕಮಲ್ ಅವರು ಅರ್ಹತಾ ಪಂದ್ಯಗಳ ಮೂರನೇ ಸುತ್ತು ಪ್ರವೇಶಿಸಲು ಮಾತ್ರ ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.