ನವದೆಹಲಿ: ಅನುಭವಿ ಜಿ.ಸತ್ಯನ್, ಲೆಬನಾನ್‌ನ ರಾಜಧಾನಿ ಬೇರೂತ್‌ನಲ್ಲಿ ನಡೆದ ಡಬ್ಲ್ಯುಟಿಟಿ ಫೀಡರ್ ಸರಣಿಯ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದುಕೊಂಡರು. ಈ ಸಾಧನೆ ಮಾಡಿದ ಭಾರತದ ಮೊತ್ತಮೊದಲ ಆಟಗಾರ ಎನ್ನುವ ಶ್ರೇಯಸ್ಸು ಅವರದಾಯಿತು.
11ನೇ ಶ್ರೇಯಾಂಕ ಪಡೆದಿದ್ದ ಸತ್ಯನ್, ಗುರುವಾರ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಸ್ವದೇಶದ ಮಾನವ್ ಠಕ್ಕರ್ ಅವರನ್ನು 3–1 ರಿಂದ (6–11, 11–7, 11–7, 11–4 ರಿಂದ ಸೋಲಿಸಿದರು.
ಫೈನಲ್‌ಗೇರುವ ಹಾದಿಯಲ್ಲಿ ಅವರು ಐದನೇ ಶ್ರೇಯಾಂಕ ಪಡೆದಿದ್ದ ಸ್ವದೇಶದ ಆಟಗಾರ ಹರ್ಮಿತ್ ದೇಸಾಯಿ ಅವರನ್ನು 15–13, 6–11, 11–8, 13–11 ರಿಂದ ಮಣಿಸಿದ್ದರು. ನಂತರ ಅಗ್ರ ಶ್ರೇಯಾಂಕದ ಚುವಾಂಗ್ ಚಿ ಯುವಾನ್ (ತೈವಾನ್) ಅವರನ್ನು 11–8, 11–13, 11–8, 11–9 ರಿಂದ ಹಿಮ್ಮೆಟ್ಟಿಸಿದರು.
2021ರ ನಂತರ ಸತ್ಯನ್ ಮೊದಲ ಬಾರಿ ಅಂತರರಾಷ್ಟ್ರೀಯ ರ್‍ಯಾಂಕಿಂಗ್ ಟೂರ್ನಿಯಲ್ಲಿ ಗೆದ್ದಂತಾಗಿದೆ. ಆ ವರ್ಷ ಅವರು ಐಟಿಟಿಎಫ್ ಇಂಟರ್‌ನ್ಯಾಷನಲ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು.
60ರ ಷಿಯಾಗೆ ಪ್ರಶಸ್ತಿ:
ಚೀನಾದ ಷಿಯಾ ಲಿಯಾನ್ ನಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಸುಲಭವಾಗಿ ಗೆದ್ದುಕೊಂಡರು. ಉತ್ತಮ ಲಯದಲ್ಲಿದ್ದ ಅವರು ಫೈನಲ್‌ನಲ್ಲಿ 11–9, 11–5, 11–5 ರಿಂದ ಸುಹ್ ಹ್ಯೊ ವಾನ್ ಅವರನ್ನು ಮಣಿಸಿದರು.
ವಿಶೇಷವೆಂದರೆ ನಿ ಅವರ ವಯಸ್ಸು 60. ವೈಲ್ಡ್ ಕಾರ್ಡ್ ಮೂಲಕ ಈ ಟೂರ್ನಿಗೆ ಪ್ರವೇಶ ಪಡೆದಿದ್ದರು. ಕಳೆದ ವರ್ಷ ಯುಟಿಟಿ ಫೀಡರ್ ಹವಿರೋವ್‌ನಲ್ಲಿ ಅವರು ಮೊದಲ ಪ್ರಶಸ್ತಿ ಪಡೆದಿದ್ದರು. ಚೀನಾ ಮೂಲದ ಅವರು ಹಲವು ವರ್ಷಗಳಿಂದ ಲಕ್ಸೆಂಬರ್ಗ್‌ನಲ್ಲಿ ನೆಲೆಸಿದ್ದಾರೆ.
ಸೆಮಿಫೈನಲ್‌ನಲ್ಲಿ ಚೆನ್ ಝು ಯು ಅವರನ್ನು 11–7, 11–9, 11–4 ರಿಂದ ಹಿಮ್ಮೆಟ್ಟಿಸಿದ್ದರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಮಾನವ್ ಠಕ್ಕರ್– ಮನುಷ್ ಉತ್ಪಲ್‌ಭಾಯ್ ಷಾ ಅವರು ಎರಡನೇ ಸ್ಥಾನ ಪಡೆದರು. ಆ್ಯಂಡಿ ಪೆರೀರಾ– ಯೋರ್ಗೆ ಕಾಂಪೋಸ್ ಅವರು 5–11, 11–7, 13–11, 14–12 ರಿಂದ ಭಾರತದ ಜೋಡಿಯ ಮೇಲೆ ಜಯಗಳಿಸಿ, ಡಬ್ಲ್ಯುಟಿಟಿಯಲ್ಲಿ ಯಶಸ್ಸು ಗಳಿಸಿದ ಚೀನಾದ ಮೊದಲ ಡಬಲ್ಸ್ ಜೋಡಿ ಎನಿಸಿದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ದಿಯಾ ಚಿತಾಳೆ–ಮಾನುಷ್ ಶಾ 3–1 ರಿಂದ (11–6, 10–12, 11–6, 11–6) ಮಾನವ್– ಅರ್ಚನಾ ಕಾಮತ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.