ಕೋಪೆನ್‌ಹೇಗನ್: ಭಾರತದ ಸ್ಟಾರ್ ಡಬಲ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಪದಕ ಗೆಲ್ಲುವ ಹಾದಿಯಲ್ಲಿ ಹೆಜ್ಜೆಯಿಟ್ಟರು. ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಇಂಡೊನೇಷ್ಯಾದ ಲಿಯೊ ರೋಲಿ ಕಾರ್ನಂಡೊ – ಡೇನಿಯಲ್ ಮಾರ್ಟಿನ್ ಜೋಡಿಯನ್ನು ಸೋಲಿಸಿದರು.
ಆದರೆ ಮಹಿಳಾ ಡಬಲ್ಸ್‌ನಲ್ಲಿ ಟ್ರಿಸಾ ಜೋಲಿ– ಗಾಯತ್ರಿ ಗೋಪಿಚಂದ್ ಸವಾಲು ಅಂತ್ಯಗೊಂಡಿತು.
ವಿಶ್ವದ ಎರಡನೇ ಕ್ರಮಾಂಕದ ಜೋಡಿಯಾದ ಸಾತ್ವಿಕ್–ಚಿರಾಗ್ 21–15, 19–21, 21–9 ರಿಂದ 10ನೇ ಕ್ರಮಾಂಕದ ಎದುರಾಳಿಗಳ ವಿರುದ್ಧ ಗೆಲ್ಲಲು ಸುಮಾರು ಒಂದು ಗಂಟೆ ತೆಗೆದುಕೊಂಡರು. ಭಾರತದ ಆಟಗಾರರು ಈ ಹಿಂದಿನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಕಂಚಿನ ಪದಕ ಗಳಿಸಿದ್ದರು.
ಈ ಋತುವಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಉತ್ತಮ ಲಯದಲ್ಲಿರುವ ಸಾತ್ವಿಕ್–ಚಿರಾಗ್ ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಕಿಮ್ ಅಸ್ಟ್ರುಪ್– ಆ್ಯಂಡ4ರ್ಸ್ ಸ್ಕಾರುಪ್ ರಸ್ಮುನ್ಸೆನ್ ಜೋಡಿಯನ್ನು ಎದುರಿಸಲಿದ್ದಾರೆ. 11ನೇ ಶ್ರೇಯಾಂಕದ ಈ ಜೋಡಿ 21–15, 21–10ರಿಂದ ಏಳನೇ ಶ್ರೇಯಾಂಕದ ಒಂಗ್ ಯೆ ಸಿನ್– ಟಿಯೊ ಇ ಯಿ (ಮಲೇಷ್ಯಾ) ಜೋಡಿಯನ್ನು ಸೋಲಿಸಿತು.
ಇದಕ್ಕೆ ಮೊದಲು ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೋಲಿ 14–21, 9–21 ರಿಂದ ಅಗ್ರ ಶ್ರೇಯಾಂಕದ ಚೆನ್ ಕ್ವಿಂಗ್ ಚೆನ್– ಜಿಯಾ ಯಿ ಫಾನ್ ಜೋಡಿಯನ್ನು ಸೋಲಿಸಿತು. ಚೀನಾದ ಈ ಜೋಡಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಬಾರಿ ಚಿನ್ನದ ಪದಕದ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಈ ಋತುವಿನಲ್ಲಿ ಮೂರು ಪ್ರಶಸ್ತಿಗಳನ್ನು ಮತ್ತು ಮೂರು ಬಾರಿ ರನ್ನರ್ ಅಪ್ ಸ್ಥಾನ ಪಡೆದು ಸಕತ್ ಲಯದಲ್ಲಿದೆ.
ಚೀನಾದ ಈ ಜೋಡಿ ಎದುರು ಇದು ಭಾರತದ ಆಟಗಾರ್ತಿಯರಿಗೆ ಎರಡನೇ ಸೋಲು. ಈ ಹಿಂದೆ ಜರ್ಮನ್ ಓಪನ್‌ನಲ್ಲೂ ಅಗ್ರ ಕ್ರಮಾಂಕದ ಜೋಡಿ ಜಯಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.