ನವದೆಹಲಿ: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮಂಗಳವಾರ ಪ್ರಕಟಿಸಿದ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಕೆಳಕ್ಕಿಳಿದು ಮೂರನೇ ಸ್ಥಾನಕ್ಕಿಳಿದಿದ್ದಾರೆ.
ಭಾರತದ ಜೋಡಿ ಕಳೆದ ವಾರ ನಡೆದ ಇಂಡೊನೇಷ್ಯಾ ಓಪನ್‌ನಿಂದ ಹಿಂದೆಸರಿದಿತ್ತು. ಕಳೆದ ವರ್ಷ ಅಲ್ಲಿ ಚಾಂಪಿಯನ್ ಆಗಿತ್ತು. ಚೀನಾದ ಲಿಯಾಂಗ್ ವೀ ಕೆಂಗ್ –ವಾಂಗ್ ಚಾಂಗ್ ಜೋಡಿ ಮೊದಲ ಬಾರಿ ಅಗ್ರ ಕ್ರಮಾಂಕಕ್ಕೆ ಏರಿದೆ. ಡೆನ್ಮಾರ್ಕ್‌ನ ಕಿಮ್ ಆಸ್ಟ್ರುಪ್– ಆ್ಯಂಡರ್ಸ್ ಸ್ಕಾರುಪ್ ರೊಸ್ಮುಸ್ಸೇನ್ ಎರಡು ಸ್ಥಾನ ಮೇಲೇರಿ ಎರಡನೇ ಕ್ರಮಾಂಕ ಗಳಿಸಿದೆ.
ಮೇ ತಿಂಗಳಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಗೆದ್ದ ನಂತರ ಸಾತ್ವಿಕ್–ಚಿರಾಗ್ ವಿಶ್ವ ಕ್ರಮಾಂಕದಲ್ಲಿ ಮರಳಿ ಅಗ್ರಪಟ್ಟ ಪಡೆದಿದ್ದರು. ಆದರೆ ಫಾರ್ಮ್ ಕಳೆದುಕೊಂಡು ಸಿಂಗಪುರ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಈಗ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‌ನಲ್ಲೂ ಈ ಜೋಡಿ ಆಡುತ್ತಿಲ್ಲ.
ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಮತ್ತು ಲಕ್ಷ್ಯ ಸೆನ್ ಅವರು ಅಗ್ರ 15ರ ಒಳಗೆ ಮುಂದುವರಿಸಿದ್ದಾರೆ. ಪ್ರಣಯ್ 10ನೇ ಮತ್ತು ಲಕ್ಷ್ಯ 14ನೇ ಸ್ಥಾನದಲ್ಲಿದ್ದಾರೆ. ಕಿದಂಬಿ ಶ್ರೀಕಾಂತ್ ನಾಲ್ಕು ಸ್ಥಾನ ಕೆಳಗಿಳಿದು 32ನೇ ಕ್ರಮಾಂಕಕ್ಕೆ ಸರಿದಿದ್ದಾರೆ. ಪ್ರಿಯಾಂಶು ರಾಜಾವತ್ 34ನೇ ಮತ್ತು ಕಿರಣ್ ಜಾರ್ಜ್ 35ನೇ ಸ್ಥಾನದಲ್ಲಿದ್ದಾರೆ.
ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 10ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಒಂದು ಸ್ಥಾನ ಸುಧಾರಣೆ ಕಂಡಿದ್ದು 19ನೇ ಸ್ಥಾನಕ್ಕೇರಿದ್ದಾರೆ. ಇವರಿಬ್ಬರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಟ್ರೀಸಾ ಜೋಲಿ– ಗಾಯತ್ರಿ ಗೋಪಿಚಂದ್ ಕೂಡ ಒಂದು ಸ್ಥಾನ ಬಡ್ತಿ ಪಡೆದು 24ನೇ ಕ್ರಮಾಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.