ನವದೆಹಲಿ: ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಲಕ್ಷ್ಯ ಸೇನ್ ಮತ್ತು ಸೈನಾ ನೆಹ್ವಾಲ್ ಅವರು ಇಂಡಿಯಾ ಓಪನ್ ಸೂಪರ್ –750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಸೇನ್ 21-16, 15-21, 18-21 ರಲ್ಲಿ ಡೆನ್ಮಾರ್ನ್‌ನ ರಸ್ಮಸ್ ಗೆಮ್ಕೆ ಎದುರು ಪರಾಭವಗೊಂಡರು. ಈ ಜಿದ್ದಾಜಿದ್ದಿನ ಹೋರಾಟ ಒಂದು ಗಂಟೆ 21 ನಿಮಿಷ ನಡೆಯಿತು.
ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೈನಾ 9–21, 12–21 ರಲ್ಲಿ ಚೀನಾದ ಚೆನ್ ಯು ಫೆ ಅವರಿಗೆ ಮಣಿದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಗಾಯತ್ರಿ ಗೋಪಿಚಂದ್– ತ್ರಿಶಾ ಜೋಲಿ 9–21, 16–21 ರಲ್ಲಿ ಚೀನಾದ ಜಾಂಗ್ ಶು ಕ್ಸಿಯಾನ್– ಜೆಂಗ್ ಯು ಎದುರು ಸೋತರು.
ಹಿಂದೆ ಸರಿದ ಸಾತ್ವಿಕ್– ಚಿರಾಗ್: ಕಳೆದ ಬಾರಿಯ ಚಾಂಪಿಯನ್ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಟೂರ್ನಿಯಿಂದ ಹಿಂದೆ ಸರಿದರು.
'ಸಾತ್ವಿಕ್ ಅವರು ಗಾಯಗೊಂಡಿದ್ದರಿಂದ, ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ’ ಎಂದು ಚಿರಾಗ್ ತಿಳಿಸಿದರು.
ಸಾತ್ವಿಕ್ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎಂದು ಬ್ಯಾಡ್ಮಿಂಟನ್ ಫೆಡರೇಷನ್ ಆಫ್ ಇಂಡಿಯಾ (ಬಿಎಐ) ಹೇಳಿತ್ತು. ಭಾರತದ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲಿಯು ಯು ಚೆನ್ ಮತ್ತು ಕ್ಸುವಾನ್ ಲಿ ವಿರುದ್ಧ ಪೈಪೋಟಿ ನಡೆಸಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.