ಪ್ಯಾರಿಸ್: ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ಅಗ್ರಗಣ್ಯ ಡಬಲ್ಸ್ ಆಟಗಾರರಾದ ಭಾರತದ ಸಾತ್ವಿಕ್ ಸಾಯಿ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ವಿಶ್ವದ 12ನೇ ಶ್ರೇಯಾಂಕಿತ ಮಲೇಷ್ಯಾ ಜೋಡಿಯನ್ನು 21-13, 24-22 ರಿಂದ 47 ನಿಮಿಷಗಳಲ್ಲಿ ಮಣಿಸಿ, ಟೂರ್ನಿಯಲ್ಲಿ ಉತ್ತಮ ಆರಂಭ ಕಂಡರು.
ಕಳೆದ ಮೂರು ಟೂರ್ನಿಗಳಲ್ಲಿ ಎರಡನೇ ಅತ್ಯುತ್ತಮ ಸ್ಥಾನ ಪಡೆದಿದ್ದ ಸಾತ್ವಿಕ್ ಮತ್ತು ಚಿರಾಗ್ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಮನ್ ವೀ ಚೊಂಗ್ ಮತ್ತು ಕೈ ವುನ್ ಟೀ ಅವರನ್ನು ಎದುರಿಸಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ವಿರುದ್ಧ 16-21, 21-19, 21-17 ಅಂತರದಲ್ಲಿ ಜಯಗಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಉಭಯ ಜೋಡಿಗಳು ಹೋರಾಡುತ್ತಿವೆ. ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಶ್ರೇಯಾಂಕದಲ್ಲಿ ತನಿಶಾ-ಅಶ್ವಿನಿ 11 ನೇ ಸ್ಥಾನದಲ್ಲಿದ್ದರೆ, ತ್ರಿಸಾ-ಗಾಯತ್ರಿ 14 ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.