ಯೋಸು, ಕೊರಿಯ: ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಕೊರಿಯಾ ಒಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಸಾತ್ವಿಕ್ ಮತ್ತು ಚಿರಾಗ್ ಅವರು ಈ ವರ್ಷ ಗೆದ್ದ ನಾಲ್ಕನೇ ಪ್ರಶಸ್ತಿ ಇದಾಗಿದೆ. ಸ್ವಿಸ್ ಓಪನ್, ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಇಂಡೊನೇಷ್ಯಾ ಓಪನ್ ಪ್ರಶಸ್ತಿಗಳನ್ನು ಇದೇ ವರ್ಷ ಜಯಿಸಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿಯು 17–21, 21–13, 21–14ರಿಂದ ವಿಶ್ವ ಬ್ಯಾಡ್ಮಿಂಟನ್ ಕಂಚಿನ ಪದಕವಿಜೇತ ಅಲ್ಫಿಯಾನ್ ಮತ್ತು ಆರ್ಡಿಯಾಂಟೊ ಅವರನ್ನು ಸೋಲಿಸಿದರು.
2022ರಲ್ಲಿ ಕಾಮನ್‌ವೇಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಸಾತ್ವಿಕ್ ಮತ್ತು ಚಿರಾಗ್ ನಂತರದ ಟೂರ್ನಿಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ತಾವು ಆಡಿರುವ ಕಳೆದ ಹತ್ತು ಪಂದ್ಯಗಳಲ್ಲಿ ಸೋತಿಲ್ಲವೆಂಬ ಹೆಗ್ಗಳಿಕೆಯೂ ಇವರದ್ದಾಗಿದೆ.
ಫೈನಲ್‌ನಲ್ಲಿ ಭಾರತದ ಜೋಡಿಗೆ ಎದುರಾದ ಇಂಡೊನೇಷ್ಯಾದ ಅಲ್ಫೆನ್ ಮತ್ತು ಅರ್ಡಿಯಾಂಟೊ ಅವರು ಕಠಿಣ ಪೈಪೋಟಿಯೊಡ್ಡಿದರು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಎರಡೂ ಜೋಡಿಗಳು 2–2ರ ಬಲಾಬಲ ಹೊಂದಿದ್ದವು.
ಈ ವಾರವು ನಮಗೆ ಬಹಳ ವಿಶೇಷವಾಗಿದೆ. ಈ ಅವಧಿಯಲ್ಲಿ ಅದ್ಭುತವಾದ ಬ್ಯಾಡ್ಮಿಂಟನ್ ಆಡಿದ್ದೇವೆ. ಇದೇ ಲಯವನ್ನು ಮುಂದುವರಿಸುವತ್ತ ಗಮನ ನೆಟ್ಟಿದ್ದೇವೆ. ಮುಂದಿನ ವಾರ ಜಪಾನ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಇಂತಹದೇ ಆಟವಾಡುವ ವಿಶ್ವಾಸವಿದೆ.ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ
ಈ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಜೋಡಿಯು ಸೋಲನುಭವಿಸಿತು. ಈ ಗೇಮ್‌ನ ಒಂದು ಹಂತದಲ್ಲಿ ಸಾತ್ವಿಕ್ ಜೋಡಿಯು 10–19ರಿಂದ ಹಿನ್ನಡೆ ಅನುಭವಿಸಿತ್ತು. ಆ ಸಂದರ್ಭದಲ್ಲಿ ಸತತ ಆರು ಪಾಯಿಂಟ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದ ಸಾತ್ವಿಕ್–ಚಿರಾಗ್ ಜೋಡಿಯು ಮುನ್ನಡೆ ಸಾಧಿಸುವ ಭರವಸೆ ಮೂಡಿಸಿತ್ತು. ಆದರೆ ಅದಕ್ಕೆ ಎದುರಾಳಿಗಳು ಅವಕಾಶ ನೀಡಲಿಲ್ಲ.
ಈ ಗೇಮ್‌ನಲ್ಲಿ ಆದ ಎಲ್ಲ ಲೋಪಗಳನ್ನು ಸುಧಾರಿಸಿಕೊಂಡು ಎರಡನೇ ಮತ್ತು ಮೂರನೇ ಗೇಮ್‌ಗಳಲ್ಲಿ ಭಾರತದ ಆಟಗಾರರು ಪಾರಮ್ಯ ಮೆರೆದರು.
ಸಾತ್ವಿಕ್ ಅವರ ಶರವೇಗದ ಸ್ಮ್ಯಾಷ್‌ಗಳಿಗೆ ಇಂಡೊನೇಷ್ಯಾ ಆಟಗಾರರ ಬಳಿ ಪ್ರತ್ಯುತ್ತರವಿರಲಿಲ್ಲ. ಚಿರಾಗ್ ಅವರ ಅಮೋಘವಾದ ಫುಟ್‌ವರ್ಕ್ ಮತ್ತು ನೆಟ್ ಬಳಿಯ ಆಟವೂ ಗೆಲುವಿಗೆ ಕಾರಣವಾದವು.
Quote - ಈ ವಾರವು ನಮಗೆ ಬಹಳ ವಿಶೇಷವಾಗಿದೆ. ಈ ಅವಧಿಯಲ್ಲಿ ಅದ್ಭುತವಾದ ಬ್ಯಾಡ್ಮಿಂಟನ್ ಆಡಿದ್ದೇವೆ. ಇದೇ ಲಯವನ್ನು ಮುಂದುವರಿಸುವತ್ತ ಗಮನ ನೆಟ್ಟಿದ್ದೇವೆ. ಮುಂದಿನ ವಾರ ಜಪಾನ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಇಂತಹದೇ ಆಟವಾಡುವ ವಿಶ್ವಾಸವಿದೆ. – ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.