ಟೆರಸ್ಸಾ, ಸ್ಪೇನ್: ಗೋಲುಪೆಟ್ಟಿಗೆಗೆ ಭದ್ರಕೋಟೆಯಾಗಿ ನಿಂತ ನಾಯಕಿ ಸವಿತಾ ಪೂನಿಯಾ ಭಾರತ ಮಹಿಳಾ ಹಾಕಿ ತಂಡಕ್ಕೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಜಯ ಗಳಿಸಿಕೊಟ್ಟರು. ಮಂಗಳವಾರ ನಡೆದ ಕೆನಡಾ ಎದುರಿನ ಪಂದ್ಯದಲ್ಲಿತಂಡವು 3–2ರಿಂದ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತು.
ಈಗಾಗಲೇ ಟೂರ್ನಿಯ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿದ್ದ ಭಾರತಕ್ಕೆ ಈ ಜಯ ಸಮಾಧಾನಕರ ತಂದಿತು.
ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿದ್ದವು. ಕೆನಡಾ ತಂಡದ ಮೇಡ್‌ಲಿನ್ ಸೆಕೊ 11ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಭಾರತದ ಪರ 58ನೇ ನಿಮಿಷದಲ್ಲಿ ಸಲೀಮಾ ಟೆಟೆ ಕೈಚಳಕ ತೋರಿದರು.
ಶೂಟೌಟ್‌ನಲ್ಲಿ ಭಾರತ ಮೂರು ಬಾರಿ ಯಶಸ್ಸು ಕಂಡರೆ, ಎದುರಾಳಿ ತಂಡಕ್ಕೆ ಎರಡು ಗೋಲುಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಶೂಟೌಟ್‌ನಲ್ಲಿ ಸವಿತಾ ಎದುರಾಳಿ ತಂಡದ ಆರು ಪ್ರಯತ್ನಗಳನ್ನು ವಿಫಲಗೊಳಿಸಿದರು. ನವನೀತ್ ಕೌರ್, ಸೋನಿಕಾ ಮತ್ತು ನೇಹಾ ಭಾರತ ತಂಡಕ್ಕಾಗಿ ಗೋಲು ಗಳಿಸಿದರು.
ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿ ಪೈಪೋಟಿ ನಡೆಸಿದವು. ಆರಂಭದಲ್ಲೇ ಕೆನಡಾ ಮುನ್ನಡೆ ಸಾಧಿಸಿದ್ದು, ಭಾರತ ತಂಡದ ಒತ್ತಡ ಹೆಚ್ಚಿಸಿತು. 25ನೇ ನಿಮಿಷದಲ್ಲಿ ನವನೀತ್ ಮತ್ತು ವಂದನಾ ಗೋಲು ಗಳಿಕೆಯ ಉತ್ತಮ ಅವಕಾಶವೊಂದನ್ನು ಸೃಷ್ಟಿಸಿದ್ದರು. ಆದರೆ ಎದುರಾಳಿ ಗೋಲ್‌ಕೀಪರ್ ರೋವನ್ ಹ್ಯಾರಿಸ್ ಚೆಂಡನ್ನು ತಡೆದರು. ಆ ಬಳಿಕವೂ ಕೆಲವು ಅವಕಾಶಗಳು ದೊರೆತರೂ ತಂಡವು 58ನೇ ನಿಮಿಷದಲ್ಲಿ ಸಮಬಲ ಸಾಧಿಸಿತು. ಸಲೀಮಾ ಗೋಲು ದಾಖಲಿಸಿದರು.
ಭಾರತ ತಂಡವು 9–12ನೇ ಸ್ಥಾನ ನಿರ್ಧರಿಸುವ ಮುಂದಿನ ಪಂದ್ಯದಲ್ಲಿ ಜಪಾನ್ ಸವಾಲು ಎದುರಿಸಲಿದೆ. ಬುಧವಾರ ರಾತ್ರಿ 8 ಗಂಟೆಗೆ ಈ ಪಂದ್ಯ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.