ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವೈಫಲ್ಯ ಸೇರಿದಂತೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಯಾನೆಕ್ ಶೋಪ್‌ಮನ್ ಅವರನ್ನು ಮುಂದುವರಿಸುವ ಸಾಧ್ಯತೆ ಇಲ್ಲ.
ಶೋಪ್‌ಮನ್ ಅವರ ಗುತ್ತಿಗೆ ಅವಧಿ ಈ ವರ್ಷದ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ವಿಸ್ತರಣೆ ಮಾಡುವ ಸಾಧ್ಯತೆಯಿಲ್ಲ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದ ವಿಶ್ಲೇಷಣಾತ್ಮಕ ತರಬೇತುದಾರರಾಗಿದ್ದ ಶೋಪ್‌ಮನ್, ನಂತರ ಸ್ಪೇನ್‌ನ ಸ್ಜೋರ್ಡ್ ಮಾರಿಜ್ನೆ ನಿರ್ಗಮನದ ಬಳಿಕ ರಾಷ್ಟ್ರೀಯ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.
‘ಷೋಪ್ಮನ್ ಅವರ ಒಪ್ಪಂದವು ಜುಲೈ-ಆಗಸ್ಟ್ (ಪ್ಯಾರಿಸ್ ಒಲಿಂಪಿಕ್ಸ್ ವರೆಗೆ)ನಲ್ಲಿ ಕೊನೆಗೊಳ್ಳುತ್ತದೆ. ಏನಾಗುತ್ತದೆ ಎಂದು ನೋಡೋಣ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಹಾಕಿ ಇಂಡಿಯಾ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಚೀನಾದ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ತಂಡ ಕಂಚಿನ ಪದಕ ಗೆದ್ದಿತ್ತು. ಈ ಸಾಧನೆ ಹೊರತುಪಡಿಸಿ, ಸವಿತಾ ಪೂನಿಯಾ ನೇತೃತ್ವದ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲಲು ವಿಫಲವಾಯಿತು. ಇದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದಿತ್ತು.
ಪುರುಷ ಮತ್ತು ಮಹಿಳಾ ಹಾಕಿ ತಂಡದ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಷೋಪ್ಮನ್ ಆರೋಪವನ್ನು ನಿರಾಕರಿಸಿರುವ ಹಾಕಿ ಇಂಡಿಯಾ, ‘ಅವರು ಈ ವಿಷಯಗಳನ್ನು ಏಕೆ ಹೇಳುತ್ತಿದ್ದಾರೆ ಎಂದು ತಿಳಿದಿಲ್ಲ. ಹಾಕಿ ಇಂಡಿಯಾದಲ್ಲಿ ಯಾವುದೇ ತಾರತಮ್ಯವಿಲ್ಲ. ಪುರುಷ ಮತ್ತು ಮಹಿಳಾ ತಂಡಗಳನ್ನು ಸಮಾನವಾಗಿ ಪರಿಗಣಿಸುತ್ತೇವೆ’ ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.