ADVERTISEMENT

ಗಾಲ್ಫ್‌: ರ‍್ಯಾಂಕಿಂಗ್‌ನಲ್ಲಿ ಶೆಫ್ಲರ್‌ಗೆ ಅಗ್ರಸ್ಥಾನ

ಏಜೆನ್ಸೀಸ್
Published 11 ಏಪ್ರಿಲ್ 2022, 15:27 IST
Last Updated 11 ಏಪ್ರಿಲ್ 2022, 15:27 IST
ಪ್ರಶಸ್ತಿಯೊಂದಿಗೆ ಸ್ಕಾಟಿ ಶೆಫ್ಲರ್ –ಎಪಿ ಚಿತ್ರ
ಪ್ರಶಸ್ತಿಯೊಂದಿಗೆ ಸ್ಕಾಟಿ ಶೆಫ್ಲರ್ –ಎಪಿ ಚಿತ್ರ   

ಆಗಸ್ಟಾ, ಅಮೆರಿಕ: ಟೈಗರ್‌ ವುಡ್ಸ್ ಅವರಂಥ ಪ್ರತಿಭಾವಂತರಿದ್ದ ಕಣದಲ್ಲಿ ಮಿಂಚಿದ ಅಮೆರಿಕ ಆಟಗಾರ ಸ್ಕಾಟಿ ಶೆಫ್ಲರ್ ಅವರು ಆಗಸ್ಟಾ ಮಾಸ್ಟರ್ಸ್‌ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದರು.

ಭಾನುವಾರ ರಾತ್ರಿ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನ ಆರಂಭದಿಂದಲೇ ಅವರು ಅಮೋಘ ಸಾಧನೆ ಮಾಡಿದ್ದರು. ಆದರೆ ಕೊನೆಯ ದಿನ ಒತ್ತಡಕ್ಕೆ ಸಿಲುಕಿದ್ದರು. ‘ಸಣ್ಣ ಮಗುವಿನಂತೆ ಬೆಳಿಗ್ಗೆ ಅತ್ತಿದ್ದೆ. ಅಷ್ಟು ಮಾನಸಿಕ ತುಮುಲ ನನ್ನನ್ನು ಕಾಡಿತ್ತು. ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ. ಕೊನೆಗೆ ಪತ್ನಿ ಮೆರೆಡಿತ್ ಹತ್ತಿರ ಕುಳಿತುಕೊಂಡೆ. ಇನ್ನು ಮುಂದುವರಿಯಲು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿದೆ’ ಎಂದು ಪಂದ್ಯ ಮುಗಿದ ನಂತರಶೆಫ್ಲರ್ ಹೇಳಿದರು.

‘ಸ್ಪರ್ಧಾ ಕಣಕ್ಕೆ ಇಳಿದ ನಂತರ ಎಲ್ಲವೂ ಬದಲಾಯಿತು. ನನ್ನಲ್ಲಿ ಉತ್ಸಾಹ ಮೂಡಿತು. ಇದು ಗೆಲುವಿನತ್ತ ಕರೆದುಕೊಂಡು ಹೋಯಿತು’ ಎಂದು ಶೆಫ್ಲರ್ಹೇಳಿದರು. ಅವರು ವಾರದ ಎಲ್ಲ ಸುತ್ತುಗಳಲ್ಲೂ ಮುನ್ನಡೆ ಸಾಧಿಸಿದರು. ಪಿಜಿಎ ಟೂರ್‌ನಲ್ಲಿ ಒಟ್ಟು ನಾಲ್ಕು ಪ್ರಶಸ್ತಿ ಗೆದ್ದುಕೊಂಡಿರುವ 25 ವರ್ಷದ ಶೆಫ್ಲರ್ ಜನಿಸಿದ್ದು ನ್ಯೂಜೆರ್ಸಿಯ ರಿಜ್‌ವುಡ್‌ನಲ್ಲಿ. ಆರು ವರ್ಷದ ಬಾಲಕನಾಗಿದ್ದಾಗ ಅವರು ಟೆಕ್ಸಾಸ್‌ಗೆ ಸ್ಥಳಾಂತರಗೊಂಡಿದ್ದರು.

ADVERTISEMENT

ಶಾಲಾ ಹಂತದಲ್ಲೇ ಗಾಲ್ಫ್ ಆಡುತ್ತಿದ್ದ ಶೆಫ್ಲರ್ 2019ರಲ್ಲಿ ವೆಬ್‌ ಡಾಟ್ ಕಾಮ್ ಟೂರ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ವೃತ್ತಿಪರ ಗಾಲ್ಫ್‌ಗೆ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.