ADVERTISEMENT

Paris Olympics | ಸೀನ್‌ ನದಿ ಈಜಲು ಯೋಗ್ಯ: ನಗರಾಡಳಿತ

ಒಲಿಂಪಿಕ್ಸ್‌ನ ಟ್ರಯಥ್ಲಾನ್‌ ಈಜು, ಮ್ಯಾರಥಾನ್ ಈಜು ಸ್ಪರ್ಧೆಗೆ ಸಜ್ಜು

ಏಜೆನ್ಸೀಸ್
Published 12 ಜುಲೈ 2024, 13:03 IST
Last Updated 12 ಜುಲೈ 2024, 13:03 IST
ಜರ್ಮನ್‌ಪ್ರೀತ್ ಸಿಂಗ್‌
ಜರ್ಮನ್‌ಪ್ರೀತ್ ಸಿಂಗ್‌   

ಪ್ಯಾರಿಸ್‌: ಒಲಿಂಪಿಕ್ಸ್‌ಗೆ ಕೆಲವೇ ದಿನಗಳಿರುವಂತೆ ನಗರದ ಹೃದಯಭಾಗದಲ್ಲಿರುವ ಸೀನ್‌ ನದಿ ಕಳೆದ 12 ದಿನಗಳಿಂದ ಈಜಾಡಲು ಯೋಗ್ಯವಾಗಿರುವಷ್ಟು ಶುದ್ಧವಾಗಿದೆ ಎಂದು ನಗರಾಡಳಿತ (ಪ್ಯಾರಿಸ್‌ ಸಿಟಿ ಹಾಲ್‌) ಹೇಳಿದೆ.

ಈ ನದಿಯಲ್ಲಿ ಒಲಿಂಪಿಕ್ಸ್‌ನ ಟ್ರಯಥ್ಲಾನ್‌ ಸ್ಪರ್ಧೆಯ ಈಜು ಭಾಗ ಮತ್ತು ಮ್ಯಾರಥಾನ್‌ ಈಜು ಸ್ಪರ್ಧೆ ನಡೆಸಲಾಗುತ್ತಿದೆ. ಹವೆ ಅವಕಾಶ ಮಾಡಿಕೊಟ್ಟರೆ, ಜುಲೈ 26ರಂದು ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭ ಕೂಡ ಇದೇ ನದಿಯಲ್ಲಿ ನಡೆಯಲಿದೆ. 

ಕಳೆದ 12 ದಿನಗಳಲ್ಲಿ 10 ದಿನ ನೀರಿನ ಗುಣಮಟ್ಟ ಅಗತ್ಯವಿರುವ ಮಾನದಂಡಗಳಿಗೆ ಅನುಗುಣವಾಗಿತ್ತು ಎಂದು ನಗರಾಡಳಿತದ ಅಧಿಕಾರಿ ಪಿಯರೆ ರಬದಾನ್ ಆರ್‌ಎಫ್‌ಐ ಬ್ರಾಡ್‌ಕಾಸ್ಟರ್‌ಗೆ ತಿಳಿಸಿದ್ದಾರೆ.

ADVERTISEMENT

ಕೆಲವು ವಾರಗಳ ಹಿಂದೆ ಪ್ಯಾರಿಸ್‌ ಭಾಗದಲ್ಲಿ ಮಾಮೂಲಿಗಿಂತ ಹೆಚ್ಚೇ ಮಳೆಯಾದ ಪರಿಣಾಮ, ಕೊಳಚೆ ನೀರು ನದಿಗೆ ಹರಿದುಬಂದು, ನದಿಯ ಮಾಲಿನ್ಯ ಪ್ರಮಾಣ ಏರಿತ್ತು.

‘ಹವಾಮಾನವೂ ಇನ್ನೂ ಸ್ವಲ್ಪ ಸುಧಾರಿಸಬಹುದೆಂಬ ವಿಶ್ವಾಸವಿದೆ. ಆದರೆ ಸ್ಪರ್ಧೆಗಳನ್ನು ಏರ್ಪಡಿಸುವ ಸಾಧ್ಯತೆಯ ಬಗ್ಗೆ ನಾವು ಚಿಂತಿತರಾಗಿಲ್ಲ’ ಎಂದು ರಬದಾನ್ ಹೇಳಿದ್ದಾರೆ. ‘ಅವುಗಳು ನಡೆಯಲಿವೆ’ ಎಂದಷ್ಟೇ ಹಳಿದರು.

‘ಆದರೆ ಕೆಲವು ಬದಲಾವಣೆಗಳಾಗಬಹುದು’ ಎಂದು ಅವರು ವಿವರಗಳನ್ನೇನೂ ನೀಡಲಿಲ್ಲ.

ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ 14 ದಿನಗಳ ಕಾಲ, ಅಂದರೆ ಕ್ರೀಡೆ ಆರಂಭದಕ್ಕೆ ಒಂದು ದಿನ ಮೊದಲಿನವರೆಗೆ ಪ್ಯಾರಿಸ್‌ನಲ್ಲಿ ಒಣಹವೆಯಿರಲಿದೆ. ಜುಲೈ 26ರಂದು ಒಲಿಂಪಿಕ್ಸ್‌ ಆರಂಭ.

ಜುಲೈ 4ರಂದು ನದಿಯಲ್ಲಿ ಇ.ಕೋಲಿ ಬ್ಯಾಕ್ಟೀರಿಯಾ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕೆಳಗಿಳಿದಿದೆ ಎಂದು ಸಿಟಿಹಾಲ್‌ ತಿಳಿಸಿತ್ತು.

ಕಳೆದ ತಿಂಗಳು ಒಂದು ಹಂತದಲ್ಲಿ ಕೋಲಿ ಬ್ಯಾಕ್ಟೀರಿಯಾ ಪ್ರಮಾಣ ನಿಗದಿ ಮಟ್ಟಕ್ಕಿಂತ 10 ಪಟ್ಟು ಹೆಚವಚು ಇತ್ತು. ಜುಲೈ 30, 31ರಂದು ನದಿಯಲ್ಲಿ ಟ್ರಯಥ್ಲಾನ್ ಸ್ಪರ್ಧೆಯ ಈಜು ಭಾಗ ನಡೆಯಲಿದೆ. ಆಗಸ್ಟ್‌ 5 ಮತ್ತು 8,9 ರಂದು ಮ್ಯಾರಥಾನ್‌ ಈಜು ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲೆ: ಸಾಬ್ಳೆ

ನವದೆಹಲಿ: ‘ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಒಲಿಂಪಿಕ್ಸ್‌ನಲ್ಲಿ ನಾನು ಸ್ಪರ್ಧಿಯಾಗಿ ಅಷ್ಟೇ ಉಳಿಯಲು ಬಯಸುವುದಿಲ್ಲ ಪದಕವನ್ನೂ ಗೆಲ್ಲಬಲ್ಲೆ’ ಎಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ 3000 ಮೀ. ಸ್ಟೀಪಲ್‌ಚೇಸರ್‌ ಅವಿನಾಶ್‌ ಸಾಬ್ಳೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 29 ವರ್ಷದ ಸಾಬ್ಳೆ ಇತ್ತೀಚೆಗಷ್ಟೇ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿದ್ದರು. ಅವರಿಗೆ ಇದು ಎರಡನೇ ಒಲಿಂಪಿಕ್ಸ್‌ 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಫೈನಲ್ ತಲುಪಲು ವಿಫಲರಾಗಿದ್ದರು. ‘ನಾನು ಭಾಗವಹಿಸುವುದಷ್ಟನ್ನೇ ಬಯಸುವುದಿಲ್ಲ. ಪದಕ ಗೆಲ್ಲುವೆನೆಂಬ ವಿಶ್ವಾಸ ನನಗಿದೆ. ಗುರಿಯತ್ತ ಕಣ್ಣಿಟ್ಟಿದ್ದು ಪರಿಶ್ರಮ ಹಾಕುತ್ತಿದ್ದೇೆನೆ. ಎಲ್ಲವೂ ನಾನು ಅಂದುಕೊಂಡಂತೆ ನಡೆದರೆ ನಾನು ಪದಕ ಗೆಲ್ಲುವೆ’ ಎಂದು ಅವರು ಜಿಯೊ ಸಿನಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಬ್ಳೆ ಈ ತಿಂಗಳ ಆರಂಭದಲ್ಲಿ ನಡೆದ ಪ್ಯಾರಿಸ್‌ ಡೈಮಂಡ್ ಲೀಗ್‌ನಲ್ಲಿ 8ನಿ.9.91 ಸೆ.ಗಳಲ್ಲಿ ಗುರಿತಲುಪಿ ತಮ್ಮದೇ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಸುಧಾರಿಸಿದ್ದರು. ಈ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಈ ಅವಧಿಗಿಂತ ಮೊದಲೇ ಓಡಿದ ಕನಿಷ್ಠ ಏಳು ಮಂದಿ ಓಟಗಾರರನ್ನು ಅವರು ಎದುರಿಸಬೇಕಾಗಿದೆ. ಭಾರತದ ದಿಗ್ಗಜ ಅಥ್ಲೀಟುಗಳಾದ ಮಿಲ್ಖಾ ಸಿಂಗ್‌ ಶ್ರೀರಾಮ್ ಸಿಂಗ್ ಮತ್ತು ಪಿ.ಟಿ. ಉಷಾ ಅವರು ಸಾಬ್ಳೆ ಅವರಿಗೆ ಒಲಿಂಪಿಕ್ ಪದಕಕ್ಕೆ ಪ್ರೇರಣೆಯಗಿದ್ದಾರೆ.

ಒಲಿಂಪಿಕ್ಸ್‌ ಪದಾರ್ಪಣೆಗೆ ಸಜ್ಜಾದ ಜರ್ಮನ್‌ಪ್ರೀತ್

ನವದೆಹಲಿ: ಉದ್ದೀಪನ ಮದ್ದು ಸೇವನೆಗಾಗಿ 2016ರಲ್ಲಿ ಎರಡು ವರ್ಷ ನಿಷೇಧ ಶಿಕ್ಷೆಯಿಂದ ಜರ್ಮನ್‌ಪ್ರೀತ್ ಸಿಂಗ್‌ ಅವರ ವೃತ್ತಿಜೀವನ ಡೋಲಾಯಮಾನ ಆಗುವ ಹಾದಿಯಲ್ಲಿತ್ತು. ಆದರೆ ಅದರಿಂದ ಹೊರಬಂದ ಭಾರತ ಹಾಕಿ ತಂಡದ ರಕ್ಷಣೆ ಆಟಗಾರ ಆ ಕಹಿಯನ್ನೆಲ್ಲಾ ಮರೆತು ಈಗ ಒಲಿಂಪಿಕ್ಸ್‌ಗೆ ಪದಾರ್ಪಣೆಗೆ ಸಜ್ಜಾಗಿದ್ದಾರೆ. ಈಗ ಕೆಲವು ವರ್ಷಗಳಿಂದ ಜರ್ಮನ್‌ಪ್ರೀತ್ ಭಾರತ ತಂಡದ ಕಾಯಂ ಆಟಗಾರ. ಅವರು ಪ್ಯಾರಿಸ್‌ಗೆ ತೆರಳುತ್ತಿರುವ 16 ಆಟಗಾರರ ಹಾಕಿ ತಂಡದಲ್ಲಿದ್ದಾರೆ. ‌‘ಆ ಡೋಪಿಂಗ್ ಬ್ಯಾನ್ ನನ್ನ ಜೀವನದ ಕರಾಳ ಹಂತ. ಆ ವೇಳೆ ನನಗೆ ಅನಿಶ್ಚಿತತೆ ಕಾಡಿತ್ತು’  ಎಂದು 2016 ರಿಂದ 18ರವರೆಗೆ ನಿಷೇಧ ಅನುಭವಿಸಿದ್ದ ಆಟಗಾರ ಹೇಳಿದರು. ‘ಆಟಗಾರರು ಇಂಥ ಹಿನ್ನಡೆಯಿಂದ ಸಾಮಾನ್ಯವಾಗಿ ಹೊರಬರುವುದಿಲ್ಲ. ಎರಡು ವರ್ಷ ಪಂದ್ಯಗಳನ್ನಾಡದೇ ಕುಳಿತುಕೊಳ್ಳುವುದೆಂದರೆ ಕ್ರೀಡೆಯಲ್ಲಿ ಕಷ್ಟ’ ಎಂದರು.‌ ಜೂನಿಯರ್ ವಿಶ್ವಕಪ್‌ ಆಡಲು 2016ರಲ್ಲಿ ಸಜ್ಜಾಗುವಾಗ ಅವರು ಉದ್ದೀಪನ ಮದ್ದು ಸೇವನೆ ಮಾಡಿದ್ದು ಪತ್ತೆಯಾಗಿತ್ತು. ಆದರೆ ಪಂಜಾಬ್‌ನ ಆಟಗಾರ ಪುನರಾಗಮನ ಮಾಡುವಲ್ಲಿ ಯಶಸ್ವಿ ಆದರು. ಸೀನಿಯರ್ ತಂಡಕ್ಕೆ ಮರಳಿದರು. ‘2018ರಲ್ಲಿ ಹಾಕಿ ಇಂಡಿಯಾ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಂತರ ನಡೆದ ಶಿಬಿರಕ್ಕೆ ಆಯ್ಕೆಯಾದ 50 ಸಂಭನವೀಯರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ವೃತ್ತಿಜೀವನ ಮತ್ತೆ ಕಟ್ಟಿಕೊಳ್ಳಲು ಹಾಕಿ ಇಂಡಿಯಾ ನನಗೆ ಅವಕಾಶ ನೀಡಿತು’ ಎಂದು ಅವರು ನೆನಪಿಸಿಕೊಂಡರು. ‘ಅವರು ನನ್ನ ಸಾಮರ್ಥ್ಯ ಗುರುತಿಸಿದರು. ಒಲಿಂಪಿಕ್ಸ್‌ನಲ್ಲಿ ಆಡಬೇಕೆಂಬ ಕನಸು ಹೊಂದಲು ಇದು ಅವಕಾಶ ನೀಡಿತು’ ಎಂದು 27 ವರ್ಷದ ಜರ್ಮನ್‌ಪ್ರೀತ್ ಹೇಳಿದರು. ಅವರು 98 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಬ್ರೇಡಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.