ಲಾಸಾನೆ: ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮದಲ್ಲಿ ಮಾರ್ಪಾಟು ತರಬೇಕು ಎಂದು ಆಗ್ರಹಿಸಿ ದಕ್ಷಿಣ ಆಫ್ರಿಕಾದ ಮಧ್ಯಮ ದೂರ ಓಟಗಾರ್ತಿ ಕಾಸ್ಟರ್ ಸೆಮೆನ್ಯಾ ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಹೊಸ ನಿಯಮದ ಪ್ರಕಾರ ಮಹಿಳಾ ಅಥ್ಲೀಟ್‌ಗಳಲ್ಲಿ ಇರಬಹುದಾದ ಪುರುಷರ ಹಾರ್ಮೋನು ಟೆಸ್ಟೊ ಸ್ಟೆರಾನ್ ಪ್ರಮಾಣದ ಮಿತಿಯನ್ನು ಕಡಿಮೆಗೊಳಿಸಲು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ನಿರ್ಧರಿಸಿದೆ.
ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು ಐಎಎಎಫ್, ಸೆಮೆನ್ಯಾ ಅವರಿಗೆ ತೊಂದರೆ ಮಾಡುವ ಉದ್ದೇಶ ಹೊಂದಿದೆ ಎಂದು ದೂರಿದೆ.
ಹೊಸ ನಿಮಯವು ಕಳೆದ ವರ್ಷದ ನವೆಂಬರ್‌ನಲ್ಲಿ ಜಾರಿಗೆ ಬರಬೇಕಾಗಿತ್ತು. ಆದರೆ ಅದನ್ನು ತಡೆಹಿಡಿಯಲಾಗಿದ್ದು ಈ ವಾರಾಂತ್ಯದಲ್ಲಿ ಲಾಸಾನೆಯ ಕ್ರೀಡಾ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ. ವಿಚಾರಣೆಗೆ ಸೆಮೆನ್ಯಾ ಕೂಡ ಹಾಜರಾಗಲಿದ್ದಾರೆ. ಮಾರ್ಚ್ ಅಂತ್ಯದೊಳಗೆ ತೀರ್ಪು ಹೊರಬೀಳಲಿದೆ.
ಸೆಮೆನ್ಯಾ ಜೈವಿಕವಾಗಿ ಪುರುಷ ಎಂದು ವಿಚಾರಣೆಯಲ್ಲಿ, ಐಎಎಎಫ್ ವಾದಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸೆಮೆನ್ಯಾ ಅವರನ್ನೇ ಗುರಿ ಇರಿಸಿ ಈ ನಿಯಮ ಜಾರಿಗೆ ತರುತ್ತಿಲ್ಲ ಎಂದು ಐಎಎಎಫ್ ಹೇಳಿದೆ.
ಮಾರ್ಟಿನಾ ಬೆಂಬಲ: ಲಂಡನ್: ಹಿರಿಯ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಟಿಲೊವಾ ಅವರು ಸೆಮೆನ್ಯಾ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ‘ಹೊಸ ನಿಯಮ ಜಾರಿಗೆ ತರುವ ಮೂಲಕ ಸೆಮೆನ್ಯಾ ಅವರನ್ನು ದೀರ್ಘದೂರ ಮತ್ತು ಮಧ್ಯಮ ದೂರ ಓಟದ ಸ್ಪರ್ಧೆಯಿಂದ ದೂರ ಇರಿಸಲು ಐಎಎಎಫ್ ಸಂಚು ಹೂಡಿದೆ ಎಂದು ಮಾರ್ಟಿನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.