ADVERTISEMENT

Paris Olympics | ಬ್ಯಾಡ್ಮಿಂಟನ್‌: 16ರ ಸುತ್ತಿಗೆ ಲಕ್ಷ್ಯ, ಸಿಂಧು

ಪಿಟಿಐ
Published 31 ಜುಲೈ 2024, 14:01 IST
Last Updated 31 ಜುಲೈ 2024, 14:01 IST
<div class="paragraphs"><p>ಪಿ.ವಿ. ಸಿಂಧು</p></div>

ಪಿ.ವಿ. ಸಿಂಧು

   

– ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ಗುಂಪಿನ ಅಂತಿಮ ಲೀಗ್‌ ಪಂದ್ಯದಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ, ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ಅವರಿಗೆ ಬುಧವಾರ ಸೋಲಿನ ಆಘಾತ ನೀಡಿದ ಭಾರತದ ಲಕ್ಷ್ಯ ಸೇನ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಒಲಿಂಪಿಕ್ಸ್‌ ಪದಕದ ಪ್ರಯತ್ನದಲ್ಲಿರುವ ಪಿ.ವಿ.ಸಿಂಧು ಸಹ 16ರ ಸುತ್ತಿಗೆ ಸ್ಥಾನ ಕಾದಿರಿಸಿದರು.

ADVERTISEMENT

‌ಅಲ್ಮೋರಾದ 22 ವರ್ಷ ವಯಸ್ಸಿನ ಆಟಗಾರ ಲಕ್ಷ್ಯ, ಪ್ರಬುದ್ಧತೆ ಮತ್ತು ತಂತ್ರಗಾರಿಕೆ ಪ್ರದರ್ಶಿಸಿ 21–18, 21–12 ರಿಂದ ಕ್ರಿಸ್ಟಿ ಅವರನ್ನು ಹಿಮ್ಮೆಟ್ಟಿಸಿದರು. ಹಾಲಿ ಆಲ್‌ ಇಂಗ್ಲೆಂಡ್ ಮತ್ತು ಏಷ್ಯನ್ ಚಾಂಪಿಯನ್ ಆಗಿರುವ ಕ್ರಿಸ್ಟಿ ನೇರ ಗೇಮ್‌ಗಳಲ್ಲಿ ಶರಣಾದರು.

‘ಎಲ್‌’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಸೆನ್‌ ಇದೀಗ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ವದೇಶದ ಎಚ್‌.ಎಸ್‌.ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ಅವರು ‘ಕೆ’ ಗುಂಪಿನ ಕೊನೆಯ ಪಂದ್ಯದಲ್ಲಿ ವಿಯೆಟ್ನಾ ಇನ ಲಿ ಡುಕ್‌ ಫಟ್‌ ಅವರನ್ನು ಎದುರಿಸಬೇಕಿದೆ.

2022ರ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸೆನ್‌ ಮೊದಲ ಪಂದ್ಯದಲ್ಲಿ ಕೆವಿನ್‌ ಕಾರ್ಡನ್‌ ಅವರನ್ನು ಸೋಲಿಸಿದ್ದರು. ಆದರೆ ಗ್ವಾಟೆಮಾಲಾದ ಆಟಗಾರ, ಮೊಣಗಂಟಿನ ನೋವಿನಿಂದ  ಹಿಂದೆಸರಿದ ಕಾರಣ ಆ ಪಂದ್ಯವನ್ನು ‘ಡಿಲೀಟ್‌’ (ದಾಖಲೆಗಳಿಂದ ಅಳಿಸಿಹಾಕುವುದು) ಎಂದು ಪರಿಗಣಿಸಲಾಯಿತು. ಕ್ರಿಸ್ಟಿ ಅವರನ್ನು ಸೋಲಿಸುವ ಮೊದಲು ಸೆನ್‌ ಅವರು ಬೆಲ್ಜಿಯಂನ ಜೂಲಿಯನ್ ಕರಾಗಿ ಅರನ್ನು ಮಣಿಸಿದ್ದರು.

‘ಪಂದ್ಯ ಹೋರಾಟದಿಂದ ಕೂಡಿತ್ತು. ನಾನು ಆಡಿದ ರೀತಿ ಸಂತಸ ಮೂಡಿಸಿದೆ’ ಎಂದು ವಿಶ್ವದ 22ನೇ ಕ್ರಮಾಂಕದ ಆಟಗಾರ ಹೇಳಿದರು. ‘ನಿಜ, ಪದಕ ಒಲಿಯುವ ಹಂತದಲ್ಲಿದೆ. ಕಳೆದ ಕೆಲವು ತಿಂಗಳಿಂದ ಉತ್ತಮ ಲಯದಲ್ಲಿದ್ದೇನೆ’ ಎಂದೂ ಹೇಳಿದರು.

ಈ ಪಂದ್ಯಕ್ಕೆ ಮೊದಲು ಕ್ರಿಸ್ಟಿ, ಭಾರತದ ಆಟಗಾರನ ವಿರುದ್ಧ ಮುಖಾಮುಖಿಯಲ್ಲಿ 4–1 ಗೆಲುವಿನ ದಾಖಲೆ ಹೊಂದಿದ್ದರು. ಈ ಮೊದಲು ಲಕ್ಷ್ಯ ಅವರ ಏಕೈಕ ಗೆಲುವು ಬ್ಯಾಡ್ಮಿಂಟನ್‌ ಏಷ್ಯಾ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ವರ್ಷಗಳ ಮೊದಲು ದಾಖಲಾಗಿತ್ತು.

ಆಕ್ಸೆಲ್ಸನ್‌ಗೆ ಸುಲಭ ಗೆಲುವು:

ಹಾಲಿ ಚಾಂಪಿಯನ್‌ ವಿಕ್ಟರ್‌ ಆಕ್ಸೆಲ್ಸನ್‌ ಅವರು ನಿಧಾನಗತಿಯ ಆರಂಭದ ನಂತರ ಮೇಲುಗೈ ಸಾಧಿಸಿ, ಐರ್ಲೆಂಡ್‌ನ ನಾಟ್‌ ಎನ್ಗುಯೆನ್ ಅವರನ್ನು ಸೋಲಿಸಿ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ 16ರ ಸುತ್ತಿಗೆ ದಾಪುಗಾಲಿಟ್ಟರು.

ಡೆನ್ಮಾರ್ಕ್‌ನ ಆಕ್ಸೆಲ್ಸನ್ 21–13, 21–10ರಲ್ಲಿ ಜಯಗಳಿಸಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಈ ಪಂದ್ಯ ಸೋಲುತ್ತಿದ್ದರೆ ಅವರು ಹೊರಬೀಳುತ್ತಿದ್ದರು. ಆದರೆ ಆಡಿದ ಮೂರರಲ್ಲೂ ಗೆದ್ದರು. ಡೆನ್ಮಾರ್ಕ್‌ನ ಆಟಗಾರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅಗ್ರ ಕ್ರಮಾಂಕದ ಶಿ ಯುಖಿ 21–9, 21–10 ರಿಂದ ಇಟಲಿಯ ಗಿಯೊವನ್ನಿ ಟೊಟಿ ಅವರನ್ನು ಸೋಲಿಸಿ ಪ್ರಿಕ್ವಾರ್ಟರ್‌ಗೆ ಮುನ್ನಡೆದರು.

ಸಿಂಧುಗೆ ಮಣಿದ ಕ್ರಿಸ್ಟಿನ್ ಕುಬಾ

ಸಿಂಧು ಮಹಿಳೆರ ವಿಭಾಗದ ‘ಎಂ’ ಗುಂಪಿನ ಲೀಗ್ ಪಂದ್ಯದಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್‌ ಕುಬಾ ಅವರನ್ನು ಬುಧವಾರ 21–5, 21–10 ರಿಂದ ಸೋಲಿಸಿದರು.

ಸಿಂಧು ಅವರಿಗೆ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ 9ನೇ ಕ್ರಮಾಂಕದ ಆಟಗಾರ್ತಿ ಹೆ ಬಿಂಗ್‌ಜಿಯಾವೊ ಎದುರಾಳಿಯಾಗುವ ನಿರೀಕ್ಷೆಯಿದೆ. ಅವರ ಎದುರು ಸಿಂಧು 11 ಪಂದ್ಯಗಳಲ್ಲಿ ಸೋತಿದ್ದು, 9 ಬಾರಿ
ಜಯಗಳಿಸಿದ್ದಾರೆ.

ಉಲ್ಲೇಖನೀಯ ವಿಷಯವೆಂದರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಿಂಧು, ಇದೇ ಎದುರಾಳಿಯನ್ನು ಮಣಿಸಿದ್ದರು.

ಸಿಂಧು, ಬುಧವಾರ ನಡೆದ ಗುಂಪಿನ ಕೊನೆಯ ಪಂದ್ಯದಲ್ಲಿ ಸಂಪೂರ್ಣ ಹತೋಟಿ ಹೊಂದಿದ್ದರು. ವಿಶ್ವ ಕ್ರಮಾಂಕದಲ್ಲಿ 73ನೇ ಸ್ಥಾನದಲ್ಲಿರುವ ಕುಬಾ ವಿರುದ್ಧ ಗೆಲ್ಲಲು 33 ನಿಮಿಷಗಳು ಸಾಕೆನಿಸಿದವು. ಗೆಲುವಿನೊಡನೆ ಅವರು ಗುಂಪಿನಲ್ಲಿ ಅಗ್ರಸ್ಥಾನ ಪಡೆದರು.

ಮೊದಲ ಗೇಮ್‌ ಗೆಲ್ಲಲು ಸಿಂಧು ತೆಗೆದುಕೊಂಡಿದ್ದು 14 ನಿಮಿಷಗಳನ್ನಷ್ಟೇ. 27 ವರ್ಷ ವಯಸ್ಸಿನ ಎದುರಾಳಿ ಎರಡನೇ ಗೇಮ್‌ನಲ್ಲಿ ಸ್ವಲ್ಪ ಹೋರಾಟ ತೋರಿದರಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.