ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಶನಿವಾರ ಜಪಾನ್‌ಗೆ ಬಂದಿಳಿದ ಸರ್ಬಿಯಾದ ಹಾಯಿದೋಣಿ ತಂಡದ ಸ್ಪರ್ಧಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಹೊರ ದೇಶದಿಂದ ಬಂದ ಕ್ರೀಡಾಪಟುವಿನಲ್ಲಿ ಖಚಿತಪಟ್ಟ ಎರಡನೇ ಸೋಂಕು ಪ್ರಕರಣವಾಗಿದೆ ಎಂದು ಎನ್‌ಎಚ್‌ಕೆ ಬಾನುಲಿ ಭಾನುವಾರ ವರದಿ ಮಾಡಿದೆ.
ಐವರು ಸದಸ್ಯರ ತಂಡದಲ್ಲಿದ್ದ ಈ ಸ್ಪರ್ಧಿಯನ್ನು ಶನಿವಾರ ರಾತ್ರಿ ಇಲ್ಲಿನ ಹನೆಡಾ ಏರ್‌ಪೋರ್ಟ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಖಚಿತವಾಗಿದೆ. ಅವರನ್ನು ವೈದ್ಯಕೀಯ ಸೌಲಭ್ಯವಿರುವ ಪ್ರತ್ಯೇಕವಾಸಕ್ಕೆ ಕಳುಹಿಸಲಾಯಿತು. ಉಳಿದವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಕ್ಯೊಡೊ ನ್ಯೂಸ್ ಏಜನ್ಸಿ ವರದಿ ಮಾಡಿದೆ.
ಸರ್ಬಿಯಾ ತಂಡವು ಒಲಿಂಪಿಕ್ಸ್ ಪೂರ್ವ ತಾಲೀಮು ನಡೆಸಲು ನ್ಯಾಂಟೊ ನಗರಕ್ಕೆ ಪ್ರಯಾಣಿಸಬೇಕಾಗಿದೆ.
ಜುಲೈ 23ರಂದು ಒಲಿಂಪಿಕ್ಸ್ ಆರಂಭವಾಗಲಿದೆ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಇನ್ನೊಂದು ಅಲೆ ಜೋರಾಗಿಯೇ ಏಳುತ್ತಿದ್ದು, ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇದರಿಂದ ಕ್ರೀಡೆಯ ಮೇಲೆಆತಂಕದ ನೆರಳು ಆವರಿಸಿದೆ.
ಜೂನ್ ತಿಂಗಳಲ್ಲಿ ಟೋಕಿಯೊಕ್ಕೆ ಬಂದಿಳಿದ ಯುಗಾಂಡಾ ತಂಡದ ಸಿಬ್ಬಂದಿಗೆ ಕೊರೊನಾ ಸೊಂಕು ದೃಢಪಟ್ಟಿತ್ತು. ಕೆಲವು ದಿನಗಳ ನಂತರ ಇನ್ನೊಬ್ಬ ಸದಸ್ಯನಿಗೂ ಸೋಂಕು ಹಬ್ಬಿದ್ದು ದೃಢಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.