ಬೆಂಗಳೂರು: ಒಲಿಂಪಿಯನ್ ಈಜುಪಟು ವೀರಧವಳ ಖಾಡೆ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ಭಾರತ ಈಜು ಫೆಡರೇಷನ್ ಮುಂದಾಗಿದೆ.
ಗ್ರೇಟರ್ ಮುಂಬೈ ಅಮೆಚೂರ್ ಅಕ್ವೆಟಿಕ್ ಅಸೋಸಿಯೇಷನ್ (ಜಿಎಂಎಎಎ)ನಲ್ಲಿ ತಮ್ಮಿಂದ ಹಿಂದೆ ತರಬೇತಿ ಪಡೆದಿದ್ದ 18 ವರ್ಷ ವಯಸ್ಸಿನ ಈಜುಗಾರ್ತಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆ ಯಾಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಗುರುವಾರ ವರದಿಯಾಗಿತ್ತು.
ಈ ಆರೋಪದ ಬೆನ್ನಲ್ಲಿ ಜಿಎಂಎಎಎಯ ಶಿಸ್ತು ಸಮಿತಿಯು ಅರ್ಜುನ ಪ್ರಶಸ್ತಿ ಪುರಸ್ಕೃತ ಈಜುಪಟುವಿನ ಮೇಲೆ ಒಂದು ವರ್ಷ ನಿಷೇಧ ಹೇರಿದೆ. ಜಿಮ್ಖಾನಾದ ಯಾವುದೇ ಸಭೆಗಳಲ್ಲಿ ಭಾಗವಹಿಸದಂತೆ ನಿರ್ಬಂಧವನ್ನೂ ಹೇರಿದೆ.
‘ಈಗ ವರದಿಯಾಗಿರುವ ಪ್ರಕರಣ ಗಾಬರಿ ಹುಟ್ಟಿಸಿದೆ. ಅವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಕ್ಕೆ ಭಾರತ ಈಜು ಫೆಡರೇಷನ್ ಒತ್ತಡ ಹಾಕಲಿದೆ’ ಎಂದು ಫೆಡರೇಷನ್‌ನ ಕಾರ್ಯದರ್ಶಿ ಮೋನಾಲ್ ಚೋಕ್ಸಿ ಹೇಳಿದರು.
‘ನಮಗೆ ಅಕ್ಟೋಬರ್ 30ರಂದು ಜಿಎಂಎಎಎನಿಂದ ಪತ್ರ ಬಂದಿದೆ. ಈ ಬಗ್ಗೆ ಪರಿಶೀಲಿಸಲು ನಮ್ಮಲ್ಲಿ ಶಿಸ್ತುಸಮಿತಿಯಿದೆ’ ಎಂದು ಚೋಕ್ಸಿ ‘ಪ್ರಜಾವಾಣಿ’ಗೆ ತಿಳಿಸಿದರು. ಇಂಥ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ನಮ್ಮಲ್ಲಿ ‘ಪೋಷ್’ (ಲೈಂಗಿಕ ಶೋಷಣೆ ತಡೆ) ಸಮಿತಿಯಿದೆ. ಈ ಪ್ರಕರಣದ ಬಗ್ಗೆ ಆಮೂಲಾಗ್ರ ತನಿಖೆ ನಡೆಸಲಾಗುವುದು. ಎರಡೂ ಕಡೆಯವರಿಂದ ಮಾಹಿತಿ ಪಡೆದು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದುನ್ನು ನಿರ್ಧರಿಸುತ್ತೇವೆ’ ಎಂದರು.
ಜಿಎಂಎಎಎ ಕಾರ್ಯದರ್ಶಿ ಕಿಶೋರ್ ವೈದ್ಯ ಅವರನ್ನು ಸಂಪರ್ಕಿಸಿದಾಗ, ‘ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಬಗ್ಗೆ ಮಾಹಿತಿಯೂ ಇಲ್ಲ’ ಎಂದು ಹೇಳಿದರು. ಖಾಡೆ ಅವರು ಮೊಬೈಲ್ ಕರೆಗೆ ಸ್ಪಂದಿಸಲಿಲ್ಲ.
ಖಾಡೆ ಅವರು ಮದ್ಯ ಅಮಲಿನಲ್ಲಿ ‘ಆಕಸ್ಮಿಕವಾಗಿ’ ಈಜುಗಾರ್ತಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾರೆ. ಅವರು ಸಮಿತಿಯ ಮುಂದೆ ಹಾಜರಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆಕೆಯ ಪೋಷಕರ ಬಳಿಯೂ ಮಾತನಾಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಕೊಲ್ಹಾಪುರದ ಖಾಡೆ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2010ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರಿ ಕೆಲಸವನ್ನು ತ್ಯಜಿಸಿ, ಯುವ ಈಜುಪಟುಗಳಿಗೆ ಕೋಚಿಂಗ್ ನೀಡುವತ್ತ ಗಮನ ಕೇಂದ್ರೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.