ADVERTISEMENT

ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆ: ಶಾನ್‌, ಲಕ್ಷ್ಯಾಗೆ ಚಿನ್ನ

ಬೆಳ್ಳಿ ಜಯಿಸಿದ ಶ್ರೀಹರಿ, ಹಷಿಕಾ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 15:48 IST
Last Updated 31 ಅಕ್ಟೋಬರ್ 2023, 15:48 IST
ಶಾನ್‌ ಗಂಗೂಲಿ
ಶಾನ್‌ ಗಂಗೂಲಿ   

ಬೆಂಗಳೂರು: ಕರ್ನಾಟಕದ ಶಾನ್‌ ಗಂಗೂಲಿ ಅವರು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯ ಪುರುಷರ 400 ಮೀ. ಮೆಡ್ಲೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.

ಮಂಗಳವಾರ ನಡೆದ ಸ್ಪರ್ಧೆಯನ್ನು ಅವರು 4 ನಿ. 28.09 ಸೆ.ಗಳಲ್ಲಿ ಪೂರೈಸಿದರು. ಮಧ್ಯಪ್ರದೇಶದ ಅದ್ವೈತ್‌ ಪಾಗೆ ಮತ್ತು ಕೇರಳದ ಸಜನ್‌ ಪ್ರಕಾಶ್‌ ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

ಮಹಿಳೆಯರ 400 ಮೀ. ಮೆಡ್ಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಕರ್ನಾಟಕದ ಪಾಲಾಯಿತು. ಎಸ್‌.ಲಕ್ಷ್ಯಾ (5 ನಿ. 12.27 ಸೆ.) ಅಗ್ರಸ್ಥಾನ ಪಡೆದರೆ, ಹಷಿಕಾ ರಾಮಚಂದ್ರ (5 ನಿ. 13.42 ಸೆ.) ಎರಡನೆಯವರಾದರು.

ADVERTISEMENT

ಶ್ರೀಹರಿಗೆ ಬೆಳ್ಳಿ: ಶ್ರೀಹರಿ ನಟರಾಜ್‌ ಅವರು ಪುರುಷರ 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯನ್ನು 22.91 ಸೆ.ಗಳೊಂದಿಗೆ ಪೂರೈಸಿ ಬೆಳ್ಳಿ ಜಯಿಸಿದರು. ಮಹಾರಾಷ್ಟ್ರದ ವೀರ್‌ಧವಳ್‌ ಖಾಡೆ (22.82 ಸೆ.) ಅವರ ಕೂಟ ದಾಖಲೆಯೊಂದಿಗೆ ಈ ಸ್ಪರ್ಧೆಯ ಚಿನ್ನ ಗೆದ್ದರು.

ಟೆನಿಸ್‌ ಫೈನಲ್‌ಗೆ ಕರ್ನಾಟಕ: ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಉತ್ತರ ಪ್ರದೇಶ ತಂಡವನ್ನು 2–1 ರಿಂದ ಮಣಿಸಿದ ಕರ್ನಾಟಕದ ಪುರುಷರ ತಂಡದವರು ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ಆದಿಲ್‌ ಕಲ್ಯಾಣಪುರ್ 3–6, 3–6 ರಿಂದ ಸಿದ್ಧಾರ್ಥ್‌ ವಿಶ್ವಕರ್ಮ ಎದುರು ಪರಾಭವಗೊಂಡರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಎಸ್‌.ಡಿ.ಪ್ರಜ್ವಲ್ ದೇವ್ 6–4, 6–2 ರಿಂದ ಸಿದ್ಧಾರ್ಥ್‌ ರಾವತ್‌ ಅವರನ್ನು ಮಣಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕ ಡಬಲ್ಸ್‌ನಲ್ಲಿ ಪ್ರಜ್ವಲ್‌– ಆದಿಲ್‌ 6–3, 7–5 ರಿಂದ ವಿಶ್ವಕರ್ಮ– ರಾವತ್‌ ಅವರನ್ನು ಸೋಲಿಸಿದರು.

ಶ್ರೇಯಾಂಕರಹಿತ ಕರ್ನಾಟಕ ತಂಡ ಇದಕ್ಕೂ ಮುನ್ನ ಕ್ವಾರ್ಟರ್‌ ಫೈನಲ್‌ನಲ್ಲಿ 2–1 ರಿಂದ ಸರ್ವಿಸಸ್‌ ತಂಡಕ್ಕೆ ಆಘಾತ ನೀಡಿತ್ತು. ಮಹಿಳಾ ತಂಡದವರು ಕ್ವಾರ್ಟರ್‌ ಫೈನಲ್‌ಲ್ಲಿ ತಮಿಳುನಾಡು ಎದುರು ಸೋತು ಹೊರಬಿದ್ದರು.

ಭಾಸ್ಕರ್‌ಗೆ ಬಿಲಿಯರ್ಡ್ಸ್‌ ಚಿನ್ನ: ಕರ್ನಾಟಕದ ಭಾಸ್ಕರ್‌ ಬಾಲಚಂದ್ರ ಅವರು ಬಿಲಿಯರ್ಡ್ಸ್‌ ಫೈನಲ್‌ನಲ್ಲಿ 3–1 ರಿಂದ ಮಹಾರಾಷ್ಟ್ರದ ರೋಹನ್ ಅವರನ್ನು ಮಣಿಸಿ ಚಿನ್ನ ಜಯಿಸಿದರು. ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಅವಕಾಶ ಲಭಿಸಿದೆ.

ಅಥ್ಲೆಟಿಕ್ಸ್‌: ಮಹಿಳಾ 4X100 ರಿಲೇ ತಂಡಕ್ಕೆ ಕಂಚು ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ 4X100 ಮಹಿಳಾ ರಿಲೇ ತಂಡದವರು ಕಂಚು ಜಯಿಸಿದರು. ಮೇಧಾ ಕಾಮತ್‌ ಎ.ಟಿ.ದಾನೇಶ್ವರಿ ಸಿ.ಅಂಜಲಿ ಮತ್ತು ಎಸ್‌.ಎಸ್‌.ಸ್ನೇಹಾ ಅವರನ್ನೊಳಗೊಂಡ ತಂಡ 46.22 ಸೆ.ಗಳಲ್ಲಿ ಗುರಿ ತಲುಪಿತು. ಆಂಧ್ರ ಪ್ರದೇಶ (45.61 ಸೆ.) ಮತ್ತು ಕೇರಳ (46.02 ಸೆ.) ತಂಡಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದವು.

ಎಸ್‌.ಲಕ್ಷ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.