ಸೇಂಟ್ ಡೆನಿಸ್, ಫ್ರಾನ್ಸ್: ಅಮೆರಿಕದ ಶಕ್ಯಾರಿ ರಿಚರ್ಡ್ಸನ್ ಮಹಿಳೆಯರ 100 ಮೀಟರ್ಸ್ ಓಟದ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಎದುರು ನಡೆದ 100 ಮೀ ಓಟದ ಮೊದಲ ಹೀಟ್ಸ್‌ನಲ್ಲಿ 10.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಶಕ್ಯಾರಿ ವಿಜೃಂಭಿಸಿದರು. ಎರಡನೇ ಸ್ಥಾನ ಪಡೆದ ಲಕ್ಸೆಂಬರ್ಗ್‌ನ ವ್ಯಾನ್ ಡೆರ್ ವೆಕೆನ್ ಮತ್ತು ಆಸ್ಟ್ರೇಲಿಯಾದ ಬ್ರೀ ಮಾಸ್ಟರ್ಸ್ ಅವರೂ ಸೆಮಿಗೆ ಅರ್ಹತೆ ಗಿಟ್ಟಿಸಿದರು.
ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಜಮೈಕಾದ ಶೆಲಿ ಆ್ಯನ್ ಫ್ರೆಸರ್ ಪ್ರೈಸ್ ಅವರು 8ನೇ ಹೀಟ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು. ಅವರು 10.92 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸೆಮಿಗೆ ಲಗ್ಗೆ ಇಟ್ಟರು.
ಇದೇ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ಕೊಟೆ ಡೆಲ್ವೊರೀಯ ಮೇರಿ ಜೋಸಿ ಟಾ ಲೌ ಸ್ಮಿತ್ (10.87ಸೆ) ಮೊದಲ ಸ್ಥಾನ ಗಳಿಸಿದರು. ಜರ್ಮನಿಯ ಜಿನಾ ಲಕೆನ್‌ಕೆಂಪರ್ (11.08ಸೆ) ಅವರು ಮೂರನೇ ಸ್ಥಾನ ಪಡೆದು ಅರ್ಹತೆ ಗಿಟ್ಟಿಸಿದರು.
ಶಕ್ಯಾರಿ ರಿಚರ್ಡ್ಸನ್ ಅವರು ತಮ್ಮ ಅರ್ಹತಾ ಸುತ್ತಿನ ಓಟದಲ್ಲಿ ಉತ್ತಮವಾಗಿ ಆರಂಭಿಸಿದರು. ಅಂತಿಮ ಗೆರೆಯವರೆಗೂ ಪಾರಮ್ಯ ಮೆರೆದರು. ಯಾವುದೆ ಹಂತದಲ್ಲಿಯೂ ವೇಗ ಕಡಿಮೆ ಮಾಡಲಿಲ್ಲ. ಅಚ್ಚ ನೇರಳೆ ಬಣ್ಣದ ಟ್ರ್ಯಾಕ್ ಮೇಲೆ ಶಕ್ಯಾರಿ ಅವರು ಧರಿಸಿದ್ದ ನಿಯಾನ್ ಹಸಿರು ಬಣ್ಣದ ಬೂಟುಗಳು ಫಳಫಳ ಹೊಳೆಯುತ್ತಿದ್ದವು.
ಫೈನಲ್‌ಗೆ ಯರೊಸ್ಲಾವಾ: ಉಕ್ರೇನ್‌ನ ಯರೊಸ್ಲಾವಾ ಮಹುಚಿಕ ಮಹಿಳೆಯರ ಹೈಜಂಪ್ ಫೈನಲ್ ಪ್ರವೇಶಿಸಿದರು.
ವಿಶ್ವ ದಾಖಲೆ ಒಡತಿ ಯರೊಸ್ಲಾವಾ ಅವರು ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 1.95 ಮೀಟರ್ಸ್ ಎತ್ತರ ಜಿಗಿದರು. ತಮ್ಮ ಎರಡನೇ ಪ್ರಯತ್ನದಲ್ಲಿಯೇ ಈ ಹಂತವನ್ನು ದಾಟಿದರು.
ಇದೇ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಲೀನಾರ್ ಪ್ಯಾಟರ್ಸನ್, ಅಮೆರಿಕದ ವಾಶ್ತಿ ಕನಿಂಗ್‌ಹ್ಯಾಮ್ ಅವರೂ ಅರ್ಹತೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.