ಬುಡಾಪೆಸ್ಟ್: ಅಮಾನೆ ಬೆರಿಸೊ ಶಂಕುಲೆ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮ್ಯಾರಥಾನ್ ಓಟದಲ್ಲಿ ಶನಿವಾರ ಇಥಿಯೋಪಿಯಾದ ಮೇಲುಗೈಗೆ ಮುನ್ನುಡಿ ಬರೆದರು. 31 ವರ್ಷದ ಶಂಕುಲೆ ಚಿನ್ನ ಗೆದ್ದರೆ, ಕಳೆದ ಸಲ ಚಿನ್ನ ಗೆದ್ದ ಗೊಟಿತೊಮ್ ಗೆಬ್ರೆಸೆಲಾಸಿ ಈ ಬಾರಿ ಬೆಳ್ಳಿಯ ಪದಕ ಪಡೆದರು.
ಬುಡಾಪೆಸ್ಟ್‌ನ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ನಡೆದ ಮ್ಯಾರಥಾನ್ ಓಟವನ್ನು ಶಂಕುಲೆ 2 ಗಂಟೆ 24 ನಿಮಿಷ 23 ಸೆಕೆಂಡುಗಳಲ್ಲಿ ಕ್ರಮಿಸಿದರು. ಇಥಿಯೋಪಿಯಾದವರೇ ಆದ ಗೆಬ್ರೆಸೆಲಾಸೆ
ಓಟ ಶುರುವಾಗುತ್ತಿದ್ದಂತೆ ಬಿಸಿಲೂ ಏರತೊಡಗಿತು. 77 ಓಟಗಾರ್ತಿಯರಲ್ಲಿ 65 ಮಂದಿ ಮಾತ್ರ ಓಟ ಪೂರೈಸಿದರು. ಆರಂಭದಲ್ಲಿ 23 ಡಿಗ್ರಿ ಸೆಲ್ಷಿಯಸ್ ಇದ್ದ ತಾಪಮಾನ ಕೊನೆಗೆ 29 ಡಿಗ್ರಿಗೆ ಏರಿತು.
‘ಉಳಿದ ಓಟಗಾರ್ತಿಯರನ್ನು ಹಿಂದೆಹಾಕಿದ ಮೇಲೆ ಸ್ಪರ್ಧೆ ನಮ್ಮಿಬ್ಬರ (ಸ್ವದೇಶದ ಗೆಬ್ರೆಸೆಲಾಸಿ) ನಡುವೆ ಸೀಮಿತಗೊಂಡಿತು’ ಎಂದು ಶಂಕುಲೆ ಹೇಳಿದರು. ಗೆಬ್ರೆಸೆಲಾಸಿ 2ಗಂ.24ನಿ34 ಸೆ. ತೆಗೆದುಕೊಂಡರು.
‘ದೇಶಕ್ಕೆ ಚಿನ್ನ ಗೆಲ್ಲಬೇಕೆಂಬುದು ಮುಖ್ಯ ಗುರಿಯಾಗಿತ್ತು. ನಾವೇ (ಇಥಿಯೋಪಿಯಾ) ಇದನ್ನು ಉಳಿಸಿಕೊಂಡಿದ್ದು ಹೆಮ್ಮೆ ತರಿಸಿದೆ’ ಎಂದು ಗೆಬ್ರೆಸೆಲಾಸಿ ಹೇಳಿದರು. ಕಳೆದ ವರ್ಷ ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆಬ್ರೆಸೆಲಾಸಿ 2ಗಂ.18ನಿ.11 ಸೆ.ಗಳಲ್ಲಿ ಓಟ ಪೂರೈಸಿ ವಿಶ್ವ ದಾಖಲೆ ಸ್ಥಾಪಿಸಿದ್ದರು.
ಫಾತಿಮಾ ಗರ್ಡಾದಿ (2:25:17) ಮೂರನೇ ಸ್ಥಾನ ಪಡೆಯುವ ಮೂಲಕ ಮ್ಯಾರಥಾನ್‌ನಲ್ಲಿ ಮೊರಾಕ್ಕೊಗೆ ಮೊದಲ ಪದಕ ತಂದುಕೊಟ್ಟರು.
ನಾಲ್ಕನೇ ಚಿನ್ನ:
ವೆನೆಜುವೇಲಾದ ಯುಲಿಮರ್ ರೋಜಾಸ್, ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಸತತ ನಾಲ್ಕನೇ ಬಾರಿ ಸ್ವರ್ಣ ಗೆದ್ದು ಸಂಭ್ರಮಿಸಿದರು. ಎಂದಿನ ಲಯದಲ್ಲಿ ಇರಲಿಲ್ಲ. ಆದರೆ ಆರನೇ ಹಾಗೂ ಕೊನೆಯ ಯತ್ನದಲ್ಲಿ ಚಿನ್ನದ ಜಿಗಿತ ಸಾಧಿಸಿದರು! ರೋಜಾಸ್ 15.08 ಮೀ. (49 ಅಡಿ, 53 ಇಂಚು) ದೂರಕ್ಕೆ ಕುಪ್ಪಳಿಸಿದರು.
‘ನನಗೆ ಪದಗಳೇ ಹೊರಡುತ್ತಿಲ್ಲ. ನಾನು ಉತ್ತಮ ನಿರ್ವಹಣೆ ತೋರಿದ ಹಿಂದಿನ ಪ್ರದರ್ಶನಗಳನ್ನೆಲ್ಲಾ ನೆನಪಿಸಿಕೊಳ್ಳುತ್ತಿರುವೆ’ ಎಂದು ಅನುವಾದಕರೊಬ್ಬರ ಮೂಲಕ ರೋಜಾಸ್ ಹೇಳಿದರು. ‘ಕೊನೆಯ ಯತ್ನದಲ್ಲಿ ಚಿನ್ನ ಗೆದ್ದಿರುವುದು ಈ ಸಲದ ಸಾಧನೆಯನ್ನು ವಿಶೇಷ ಮತ್ತು ಸ್ಮರಣೀಯವಾಗಿಸಿದೆ’ ಎಂದು ಪ್ರತಿಕ್ರಿಯಿಸಿದರು.
ಮರಿನಾ ಬೆಕ್–ರೊಮಾಂಚುಕ್ ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು (15 ಮೀ.) ಉಕ್ರೇನ್‌ಗೆ ಕೂಟದ ಮೊದಲ ಪದಕ ಗಳಿಸಿಕೊಟ್ಟರು. ಐದನೇ ಯತ್ನದವರೆಗೆ ಮರಿನಾ ಲೀಡ್‌ನಲ್ಲಿದ್ದರು. ಕ್ಯೂಬಾದ ಲೇನಿಸ್ ಪೆರೆಝ್ ಹೆರ್ನಾಂಡೆಝ್ ಕಂಚಿನ ಪದಕ ಗಳಿಸಿದರು.
200 ಮೀ.ನಲ್ಲೂ ನೋವಾಗೆ ಚಿನ್ನ
ಅಮೆರಿಕದ ನೋವಾ ಲೈಲ್ಸ್ ಪುರುಷರ 200 ಮೀ. ಓಟದಲ್ಲೂ ಜಯಶಾಲಿಯಾದರು. ಈ ಕೂಟದಲ್ಲಿ ಅವರು 100 ಮೀ. ಓಟದಲ್ಲೂ ಸ್ವರ್ಣಪದಕ ಜಯಿಸಿದ್ದರು. ಉಸೇನ್ ಬೋಲ್ಟ್ ನಂತರ ಈ ಸ್ಪ್ರಿಂಟ್ ಓಟದಲ್ಲಿ ಡಬಲ್ ಸಾಧಿಸಿದ ಮೊದಲ ಓಟಗಾರನೆಂಬ ಹಿರಿಮೆಯೂ ಅವರದಾಯಿತು. 2015ರಲ್ಲಿ ಬೋಲ್ಟ್ ಸತತ ಮೂರನೇ ಬಾರಿ ಸ್ಪ್ರಿಂಟ್ ಡಬಲ್ಸ್ ಸಾಧಿಸಿದ್ದರು.
ಈ ಕೂಟದಲ್ಲಿ ಮೂರನೇ ಬಾರಿ ಭಾಗವಹಿಸುತ್ತಿರುವ, 26 ವರ್ಷದ ಲೈಲ್ಸ್ 19.51 ಸೆ.ಗಳಲ್ಲಿ ಓಟ ಮುಗಿಸಿದರು. ಈ ಓಟದಲ್ಲಿ ಉಸೇನ್ ಬೋಲ್ಟ್ ದಾಖಲೆ (19.16) ಅಬಾಧಿತವಾಗಿ ಉಳಿದಿದೆ. ಅವರಿಗೆ ಪೈಪೋಟಿಯೊಡ್ಡಿದ ಸ್ವದೇಶದ ಎರಿಯಾನ್ ನೈಟನ್ 19.75 ಸೆ.ಗಳೊಡನೆ ಎರಡನೇ ಸ್ಥಾನ ಪಡೆದರು. ಬೋಟ್ಸ್‌ವಾನಾದ ಲೆಟ್ಸಿಲೆ ಟೆಬೊಗೊ (19.81 ಸೆ.) ಮೂರನೇ ಸ್ಥಾನ ಪಡೆದು ತಮ್ಮ ದೇಶಕ್ಕೆ ಎರಡನೇ ಪದಕ ಗಳಿಸಿಕೊಟ್ಟರು. ಅವರು 100 ಮೀ. ಓಟದಲ್ಲೂ ಪದಕ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.