ADVERTISEMENT

ಚೆಸ್ ಟೂರ್ನಿ: ಶರಣ್‌ಗೆ ನಾರಾಯಣ ಗುರು ಟ್ರೋಫಿ

ನಾರಾಯಣ ಗುರು ಟ್ರೋಫಿ ಅಖಿಲ ಭಾರತ ರ‍್ಯಾಪಿಡ್ ಚೆಸ್ ಟೂರ್ನಿ: ನಿರಾಸೆ ಕಂಡ ನಿತಿನ್‌, ಆಕಾಶ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:11 IST
Last Updated 30 ಜೂನ್ 2024, 15:11 IST
<div class="paragraphs"><p>ನಾರಾಯಣ ಗುರು ಟ್ರೋಫಿ ಜೊತೆ ಶರಣ್ ರಾವ್‌</p></div>

ನಾರಾಯಣ ಗುರು ಟ್ರೋಫಿ ಜೊತೆ ಶರಣ್ ರಾವ್‌

   

ಪಡುಬಿದ್ರಿ: ಮೊದಲ ದಿನದ ಹಿನ್ನಡೆಯಿಂದ ಚೇತರಿಸಿಕೊಂಡು ಅಮೋಘ ಆಟವಾಡಿದ ಮಂಗಳೂರಿನ ಶರಣ್ ರಾವ್‌ ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯ ನಾರಾಯಣ ಗುರು ಟ್ರೋಫಿ ತಮ್ಮದಾಗಿಸಿಕೊಂಡರು.

ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್‌ ಸಂಸ್ಥೆಯ ಉಡುಪಿ ಮತ್ತು ಕಾಪು ಘಟಕ, ಕಾಪು ಹಳೆ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಿದ್ದ ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ಅವರು 8.5 ಪಾಯಿಂಟ್ ಕಲೆ ಹಾಕಿದರು. ಟೂರ್ನಿಯಲ್ಲಿ ಭಾಗವಹಿಸಿದ ಏಕೈಕ ಇಂಟರ್‌ನ್ಯಾಷನಲ್ ಮಾಸ್ಟರ್‌ ಶರಣ್‌ ₹ 25 ಸಾವಿರ ನಗದು ಮತ್ತು ಟ್ರೋಫಿ ಗಳಿಸಿದರು.

ADVERTISEMENT

ಶನಿವಾರ ಆರು ಸುತ್ತುಗಳಲ್ಲಿ 5.5 ಪಾಯಿಂಟ್ ಗಳಿಸಿದ್ದ ಎರಡನೇ ಶ್ರೇಯಾಂಕಿತ ಶರಣ್‌ ಭಾನುವಾರದ ಎಲ್ಲ ಸುತ್ತುಗಳಲ್ಲೂ ಜಯಶಾಲಿಯಾದರು. ಅಗ್ರಶ್ರೇಯಾಂಕಿತ, ಕೇರಳದ ನಿತಿನ್ ಬಾಬು ಮತ್ತು ತಮಿಳುನಾಡಿನ ಆಕಾಶ್ ಜಿ ವಿರುದ್ಧ ಕ್ರಮವಾಗಿ 8 ಮತ್ತು 9ನೇ ಸುತ್ತುಗಳಲ್ಲಿ ಗೆದ್ದರು. ಐದನೇ ಸುತ್ತಿನಿಂದ 8ನೇ ಸುತ್ತಿನ ವರೆಗೆ ಆಕಾಶ್ ಅಗ್ರಸ್ಥಾನ ಉಳಿಸಿಕೊಂಡಿದ್ದರು.

ಆಕಾಶ್ ಜಿ, ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ತಮಿಳುನಾಡಿನ ಎಸ್‌.ಎ ಕಣ್ಣನ್ ತಲಾ 8 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಆಕಾಶ್‌ ದ್ವಿತೀಯ, ಲಕ್ಷಿತ್‌ ತೃತೀಯ ಮತ್ತು ಕಣ್ಣನ್ ನಾಲ್ಕನೇ ಸ್ಥಾನ ಗಳಿಸಿದರು. 7.5 ಪಾಯಿಂಟ್‌ಗಳೊಂದಿಗೆ ನಿತಿನ್ ಬಾಬು ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾದ ರಾಮಕೃಷ್ಣ ಜೆ, ಕರ್ನಾಟಕದ ಆರುಷ್ ಭಟ್ ಮತ್ತು ಶಾನ್ ಡಿಯೋನ್ ಸಿಕ್ವೇರ ಕೂಡ 7.5 ಪಾಯಿಂಟ್ ಗಳಿಸಿದರು.  

ತಿಂಗಳಲ್ಲಿ 3ನೇ ಪ್ರಶಸ್ತಿ

ಶರಣ್ ರಾವ್‌ ಜೂನ್ ತಿಂಗಳಲ್ಲಿ ಗೆದ್ದ ಮೂರನೇ ಪ್ರಶಸ್ತಿ ಇದಾಗಿದೆ. ಜೂನ್‌ 14ರಿಂದ ಶ್ರೀಲಂಕಾದಲ್ಲಿ ನಡೆದ ರಾಹುಲಿಯನ್ಸ್ ಬ್ಲಿಜ್‌ ಚೆಸ್‌ ಹಬ್ಬ ಮತ್ತು 22ರಿಂದ ರೋಟರಿ ಕ್ಲಬ್‌ ಹುಬ್ಬಳ್ಳಿ ಉತ್ತರ ಆಯೋಜಿಸಿದ್ದ ಅಖಿಲ ಭಾರತ ಫಿಡೆ ರೇಟಿಂಗ್‌ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು. ಮೇ 25ರಿಂದ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌ನಲ್ಲೂ ಅವರು ಪ್ರಶಸ್ತಿ ಗೆದ್ದಿದ್ದರು.

ಕೊನೆಯ ಸುತ್ತಿನ ಪ್ರಮುಖ ಫಲಿತಾಂಶಗಳು: ಮಂಗಳೂರಿನ ಶರಣ್ ರಾವ್‌ಗೆ ತಮಿಳುನಾಡಿನ ಆಕಾಶ್‌ ವಿರುದ್ಧ ಜಯ. ತಮಿಳುನಾಡಿನ ಎಸ್‌.ಎ ಕಣ್ಣನ್‌ಗೆ ಕರ್ನಾಟಕದ ದ್ರಿಕ್ಷು ಕೆ ವಸಂತ್‌ ಎದುರು, ಮಂಗಳೂರಿನ ಲಕ್ಷಿತ್ ಸಾಲ್ಯಾನ್‌ಗೆ ಗೋವಾದ ಜೋಶುವಾ ಮಾರ್ಕ್ ಟೆಲಿಸ್ ವಿರುದ್ಧ, ಕೇರಳದ ನಿತಿನ್ ಬಾಬುಗೆ ಕರ್ನಾಟಕದ ಪಂಕಜ್ ಭಟ್ ವಿರುದ್ಧ, ಕಾರ್ತಿಕ್ ಸಾಯ್‌ಗೆ ಕರ್ನಾಟಕದ ಲೀಲಾಜಯ ಕೃಷ್ಣ ವಿರುದ್ಧ ಹಾಗೂ ಕರ್ನಾಟಕದ ಪ್ರಶಾಂತ್ ನಾಯಕ್‌ಗೆ ತಮಿಳುನಾಡಿನ ದೀಪಕ್ ಲಕ್ಷಣ ಎದುರು ಜಯ; ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಮಕೃಷ್ಣ ಜೆ ಮತ್ತು ಮಂಗಳೂರಿನ ಶಾನ್‌ ಡಿಯೋನ್‌ ಸಿಕ್ವೇರಾ, ಕರ್ನಾಟಕದ ಆರುಷ್ ಭಟ್‌ ಮತ್ತು ಗೋವಾದ ಋಷಿಕೇಶ್ ಪರಬ್‌, ಕರ್ನಾಟಕದ ನಿಹಾಲ್ ಎನ್‌.ಶೆಟ್ಟಿ ಮತ್ತು ಮಹಾರಾಷ್ಟ್ರದ ಸಾಹು ವಿಕ್ರಮಾದಿತ್ಯ, ಕರ್ನಾಟಕದ ಚಿನ್ಮಯ ಎಸ್ ಭಟ್ ಮತ್ತು ಗೋವಾದ ಚೈತನ್ಯ ಗಾಂವ್ಕರ್‌ ನಡುವಿನ ಪಂದ್ಯ ಡ್ರಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.