ನವದೆಹಲಿ: ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರ ಹೆಸರನ್ನು ಈ ಸಾಲಿನ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಖೇಲ್ ರತ್ನ ಪ್ರಶಸ್ತಿಗೆ ವಿವಿಧ ಕ್ರೀಡೆಗಳ 42 ಆಕಾಂಕ್ಷಿಗಳು ಇದ್ದರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಆಯ್ಕೆ ಸಮಿತಿ ಶರತ್ ಒಬ್ಬರ ಹೆಸರನ್ನು ಮಾತ್ರ ಈ ಪ್ರತಿಷ್ಠಿತ ಗೌರವಕ್ಕೆ ಶಿಫಾರಸು ಮಾಡಿದೆ.
ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿದ್ದರು.
‘ಇದು ನಿಜಕ್ಕೂ ಹೆಮ್ಮೆಯ ವಿಚಾರ. ಈ ವಯಸ್ಸಿನಲ್ಲಿ ನನಗೆ ಪ್ರಶಸ್ತಿ ಲಭಿಸಲಿರುವುದು ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ನನಗೂ ಸ್ಫೂರ್ತಿಯಾಗಲಿದೆ’ ಎಂದು 40 ವರ್ಷದ ಶರತ್ ಪ್ರತಿಕ್ರಿಯಿಸಿದ್ದಾರೆ.
2020 ರಲ್ಲಿ ಐವರು ಕ್ರೀಡಾಪಟುಗಳಿಗೆ ಹಾಗೂ 2021 ರಲ್ಲಿ ಒಟ್ಟು 11 ಕ್ರೀಡಾಪಟುಗಳಿಗೆ ಈ ಪ್ರಶಸ್ತಿ ನೀಡಲಾಗಿತ್ತು.
ಖೇಲ್ ರತ್ನ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಕಿ ಆಟಗಾರರಾದ ಹರ್ಮನ್‌ಪ್ರೀತ್ ಸಿಂಗ್, ಆಕಾಶ್‌ದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸವಿತಾ ಪೂನಿಯಾ ಮತ್ತು ವಂದನಾ ಕಟಾರಿಯಾ ಅವರ ಹೆಸರುಗಳೂ ಇದ್ದವು.
ಆಯ್ಕೆ ಸಮಿತಿಯು ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಮಹಿಳಾ ಬಾಕ್ಸರ್ ನಿಖತ್ ಜರೀನ್ ಒಳಗೊಂಡಂತೆ 25 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.