ಭಾರತದಲ್ಲಿ ವೀಲ್‌ಚೇರ್ ಟೆನಿಸ್ ಬೆಳವಣಿಗೆ ಹಂತದಲ್ಲಿದೆ. ಕರ್ನಾಟಕದ ಹಲವು ಪ್ರತಿಭೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಮಂಡ್ಯದ ಕೆ.ಪಿ. ಶಿಲ್ಪಾ ಒಬ್ಬರು. ವೀಲ್‌ಚೇರ್ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಎರಡನೇ ಕ್ರಮಾಂಕದಲ್ಲಿರುವ ಅವರು ಡಬಲ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ಯಾರಾಲಿಂಪಿಕ್ಸ್ ಅರ್ಹತೆಯ ಕನಸು ಹೊತ್ತಿರುವ ಶಿಲ್ಪಾ, ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಕುಟುಂಬದ ಹಿನ್ನೆಲೆ ಕುರಿತು ಹೇಳಿ
ನಮ್ಮದು ಮಂಡ್ಯ ಜಿಲ್ಲೆ. ಮಧ್ಯಮ ವರ್ಗದ ಕುಟುಂಬ. ಪಿಯು ಶಿಕ್ಷಣ ಮುಗಿಸಿದ್ದು, 2010ರಲ್ಲಿ ಬೆಂಗಳೂರಿಗೆ ಬಂದೆ.
ಇದುವರೆಗೆ ಎಷ್ಟು ಟೂರ್ನಿಗಳಲ್ಲಿ ಭಾಗವಹಿಸಿದ್ದೀರಿ?
ಐದು ರಾಷ್ಟ್ರೀಯ ಹಾಗೂ 10 ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದೇನೆ. 2010ರಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆವರಣದಲ್ಲಿ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದಿದ್ದೆ. ಡಬಲ್ಸ್ ವಿಭಾಗದಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದೇನೆ. ಮಲೇಷ್ಯಾ, ಬ್ಯಾಂಕಾಕ್ ಟೂರ್ನಿಗಳಲ್ಲಿ ಭಾಗವಹಿಸಿ ರನ್ನರ್ ಅಪ್, ಮೂರನೇ ಸ್ಥಾನಗಳನ್ನು ಗಳಿಸಿದ್ದೇನೆ.
ಟೂರ್ನಿಗಳಿಗೆ ಸಿದ್ಧತೆ ಹೇಗೆ?
ಪ್ರತಿ ಶನಿವಾರ ಹಾಗೂ ಭಾನುವಾರ ಕೆಎಸ್‌ಎಲ್‌ಟಿಎ ಆವರಣದಲ್ಲಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಟೂರ್ನಿಗಳು ಮುಂದಿರುವಂತೆ ಒಂದು ತಿಂಗಳು ಸಿದ್ಧತೆ ನಡೆಸುತ್ತೇನೆ. ಇಂಡಿಯನ್ ವೀಲ್‌ಚೇರ್ ಟೆನಿಸ್ ಟೂರ್ನಿ, ಚೆನ್ನೈ ಹಾಗೂ ಹೈದರಾಬಾದ್ ಓಪನ್ ಮತ್ತಿತರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಆಯೋಜಕರ ಸಹಾಯ ಬೇಕಾಗುತ್ತದೆ.
ಸರಕಾರದಿಂದ ಸವಲತ್ತುಗಳು ದೊರೆಯುತ್ತಿದೆಯಾ?
ಅಂತರರಾಷ್ಟ್ರೀಯ ಟೂರ್ನಿಗಳಿಗೆ ಹೋಗಿ ಬಂದಾಗ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಆದರೆ ಅದು ವೆಚ್ಚದ ಶೇ. 30 ಮಾತ್ರ. ಅದೂ ನಮ್ಮ ಕೈಸೇರಬೇಕಾದರೆ ವರ್ಷ ಎರಡು ವರ್ಷ ಬೇಕಾಗುತ್ತದೆ.
ಕುಟುಂಬದ ಬೆಂಬಲ ಹೇಗಿದೆ?
ನಮ್ಮದು ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತ ಕುಟುಂಬ ವಲ್ಲ. ಆದರೆನೈತಿಕವಾಗಿ ಸಾಕಷ್ಟು ಬೆಂಬಲ, ಪ್ರೋತ್ಸಾಹ ನೀಡುತ್ತಾರೆ.
ಮುಂದಿನ ಗುರಿ?
ಈಗ ಒಂದು ಹಂತದಲ್ಲಿ ಬೆಳೆದಿದ್ದೇನೆ. ಇನ್ನೂ ಸಾಕಷ್ಟು ಸಾಧಿಸುವುದಿದೆ. ಆರಂಭದಲ್ಲಿ ವೀಲ್‌ಚೇರ್ ಟೆನಿಸ್ ಆಡುವುದನ್ನು ನೋಡಿ ಜನ ನಕ್ಕಿದ್ದು ಉಂಟು. ಅಂಗ ವೈಕಲ್ಯವನ್ನು ಮೆಟ್ಟಿನಿಂತು, ನಮ್ಮಂತ ಎಷ್ಟೋ ಜೀವಗಳಿಗೆ ಮಾದರಿಯಾಗಬೇಕೆಂಬ ಆಸೆ ಇದೆ.ಏಷ್ಯಾ ಮಟ್ಟದ ಟೂರ್ನಿ ಗಳಲ್ಲಿ ಭಾಗವಹಿಸಿ ಆಟದ ಸಾಮರ್ಥ್ಯ ವೃದ್ಧಿಸಿಕೊಂಡು ಆ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕೆಂಬ ಉದ್ದೇಶವಿದೆ. ಫೆಬ್ರುವರಿ 20ರಿಂದ ಥಾಯ್ಲೆಂಡ್‌ನಲ್ಲಿ ಇಂಟರ್‌ನ್ಯಾಷನಲ್‌ವೀಲ್‌ಚೇರ್ ಆ್ಯಂಡ್ ಆ್ಯಂಪುಟಿ ಸ್ಪೋರ್ಟ್ಸ್ ಫೆಡರೇಷನ್ (ಐವಾಸ್) ವಿಶ್ವ ಕ್ರೀಡಾಕೂಟ ನಡೆಯಲಿದೆ. ಅಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಬೇಕೆಂಬ ಆಸೆ ಇದೆ.
ಅಖಿಲ ಭಾರತ ವೀಲ್‌ಚೇರ್ ಟೆನಿಸ್ ಟೂರ್(ಎಐಡಬ್ಲ್ಯುಟಿಟಿ) ಅಧ್ಯಕ್ಷ ಸುನಿಲ್ ಜೈನ್ ಅವರು ಮುಖ್ಯ ಕೋಚ್ ನಂದಕುಮಾರ್ ಹಾಗೂ ಶಕ್ತಿವೇಲು ಅವರಿಂದ ತರಬೇತಿ ಕೊಡಿಸುತ್ತಿದ್ದಾರೆ. ಬನಶಂಕರಿ ಮಹಿಳಾ ಸಮಾಜದವರು ಸುಮಾರು ಮೂರೂವರೆ ಲಕ್ಷ ರೂಪಾಯಿಯ ವೀಲ್‌ಚೇರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಪ್ಯಾರಾಲಿಂಪಿಕ್ಸ್ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿದ್ದೀರಾ?
ಖಂಡಿತ. ಅದು ಜೀವನದ ಬಹುದೊಡ್ಡ ಕನಸು. ಆದರೆ ಆ ಹಂತ ತಲುಪಲು ಆರ್ಥಿಕ ನೆರವು ಬೇಕು. ಓಪನ್ ಟೂರ್ನಿಗಳಲ್ಲಿ ಆಡುವುದರಿಂದ ಸರ್ಕಾರ ಹೆಚ್ಚಿನ ಸಹಾಯ ನೀಡುವುದಿಲ್ಲ. ಆಯೋಜಕರು ಸಿಕ್ಕರೆ ಕನಸು ನನಸಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.