ADVERTISEMENT

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಬಾಕ್ಸರ್‌ ಸುಮಿತ್‌: ಕೋಚ್‌ ಕುಟ್ಟಪ್ಪ ಆಘಾತ

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಬಾಕ್ಸರ್‌ ಸುಮಿತ್‌ ಸಂಗ್ವಾನ್‌

ಪಿಟಿಐ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
ಸಿ.ಎ.ಕುಟ್ಟಪ್ಪ
ಸಿ.ಎ.ಕುಟ್ಟಪ್ಪ   

ನವದೆಹಲಿ: ಏಷ್ಯನ್‌ ಗೇಮ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್‌ ಸುಮಿತ್‌ ಸಂಗ್ವಾನ್‌ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದು ಆಘಾತ ತಂದಿದೆ ಎಂದು ರಾಷ್ಟ್ರೀಯ ಬಾಕ್ಸಿಂಗ್‌ ಕೋಚ್‌ ಸಿ.ಎ.ಕುಟ್ಟಪ್ಪ ಹೇಳಿದ್ದಾರೆ.

26 ವರ್ಷದ ಸಂಗ್ವಾನ್‌ ಅಕ್ಟೋಬರ್‌ನಲ್ಲಿ 91 ಕೆಜಿ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು. ತಮ್ಮ ಆದ್ಯತೆಯ81 ಕೆಜಿ ವಿಭಾಗಕ್ಕೆ ಮರಳುವ ಯತ್ನದಲ್ಲಿರುವಾಗಲೇ ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.

‘ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಸಂಗ್ವಾನ್‌ ಈಗವಿವಾದದಲ್ಲಿ ಸಿಕ್ಕಿಬಿದ್ದಿದ್ದಾರೆ. ನನಗೆ ಆಘಾತವಾಗಿದೆ. ವೃತ್ತಿಪರತೆಯಲ್ಲಿ ಅವರು ಕಳಂಕರಹಿತವಾಗಿದ್ದರು. ಇದೊಂದು ಪ್ರಮಾದ ಸಂಭವಿಸಿದೆ’ ಎಂದು ದಕ್ಷಿಣ ಏಷ್ಯಾ ಕ್ರೀಡಾಕೂಟ ಮುಗಿಸಿಕೊಂಡು ಭಾರತಕ್ಕೆ ಮರಳಿದ ಕುಟ್ಟಪ್ಪ ನುಡಿದರು.

ADVERTISEMENT

‘2017ರಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಗಾಯಗೊಂಡಿದ್ದ ಸಂಗ್ವಾನ್‌ ಸರ್ಜರಿಗೆ ಒಳಗಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಒಂದು ಸಣ್ಣ ತಪ್ಪು ಅವರನ್ನು ಈ ಸ್ಥಿತಿಗೆ ತಂದಿದೆ’ ಎಂದು ಅವರು ಹೇಳಿದರು.

ಕಳೆದ ಒಂದು ವಾರದಲ್ಲಿ ಭಾರತದ ಬಾಕ್ಸಿಂಗ್‌ ಪಟುವೊಬ್ಬರು ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದಿರುವುದು ಇದು ಎರಡನೇ ಬಾರಿ. ಮಹಿಳಾ ಬಾಕ್ಸರ್‌ ನೀರಜಾ ಪೋಗಟ್‌ ಕೂಡ ನಿಷೇಧಿತ ಮದ್ದು ಸೇವಿಸಿದ್ದು ಸಾಬೀತಾಗಿತ್ತು.

‘ಭಾರತದ ಎಲೀಟ್‌ ಬಾಕ್ಸರ್‌ಗಳು ಡೋಪಿಂಗ್‌ನಲ್ಲಿ ಸಿಕ್ಕಿಬೀಳುತ್ತಿರುವುದು ಬಹಳ ಅಪರೂಪದ ಸಂಗತಿ. ಇದು ನಮಗೆ ಆಘಾತ ನೀಡಿದೆ’ ಎಂದು ಕುಟ್ಟಪ್ಪ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.