ಸೇನ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.
ಭಾರತದ ಮನು ಭಾಕರ್ ಅವರು ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಈ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಖಾತೆ ತೆರೆದಿದೆ.
22 ವರ್ಷದ ಮನು ಭಾಕರ್ 221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ರಿಪಬ್ಲಿಕ್ ಆಫ್ ಕೊರಿಯಾದ ಓ ಯೆ ಜಿನ್ ಅವರು 243.2 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿದ್ದು, ಅವರ ಎದುರಾಳಿ ಕಿಮ್ ಯೆಜಿ 241.3 ಅಂಕ ಗಳಿಸುವ ಮೂಲಕ ಬೆಳ್ಳಿ ಗೆದ್ದಿದ್ದಾರೆ.
ಈ ಮೂಲಕ ಹರಿಯಾಣ ಮೂಲದ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕ ಗೆಲ್ಲುವ ಭಾರತದ 12 ವರ್ಷದ ಕನಸು ನನಸಾದಂತಾಗಿದೆ.
2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವಿಭಾಗದಲ್ಲಿ, ವಿಜಯ್ ಕುಮಾರ್ ಅವರು ಫೈರ್ ಪಿಸ್ತೂಲ್ ಶೂಟರ್ ವಿಭಾಗದಲ್ಲಿ ಮತ್ತು 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ಆದರೆ ಮಹಿಳಾ ವಿಭಾಗದಲ್ಲಿ ಯಾವುದೇ ಪದಕ ಗೆದ್ದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.