ನವದೆಹಲಿ: ಯುವ ಪಿಸ್ತೂಲ್ ಶೂಟರ್ ಮನು ಭಾಕರ್, ಚೀನಾ ತೈಪೆಯ ತವೋಯುನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕದ ಬೇಟೆ ಮುಂದುವರಿಸಿದ್ದಾರೆ.
ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಣದಲ್ಲಿದ್ದ ಅವರು ಶುಕ್ರವಾರ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಲದ ಚಾಂಪಿಯನ್‌ಷಿಪ್‌ನಲ್ಲಿ ಮನು ಗೆದ್ದ ಎರಡನೇ ಚಿನ್ನ ಇದಾಗಿದೆ. ಮೊದಲ ದಿನ ಸೌರಭ್ ವರ್ಮಾ ಜೊತೆ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಅರ್ಹತಾ ಸುತ್ತಿನಲ್ಲಿ 575 ಸ್ಕೋರ್ ಕಲೆಹಾಕಿ ಎರಡನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ಮನುಗೆ 24 ಶಾಟ್‌ಗಳ ಅಂತಿಮ ಘಟ್ಟದ ಹೋರಾಟದಲ್ಲಿ ಹಾಂಕಾಂಗ್‌ನ ಶಿಂಗ್ ಹೊ ಚಿಂಗ್ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು.
ಆರಂಭದ ಹಂತಗಳಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು. ಅಂತಿಮ ಶಾಟ್‌ಗಳಲ್ಲಿ ನಿಖರ ಗುರಿ ಹಿಡಿದ ಮನು ಎದುರಾಳಿಯನ್ನು ಹಿಂದಿಕ್ಕಿದರು. ಭಾರತದ ಶೂಟರ್ 239 ಸ್ಕೋರ್ ಕಲೆಹಾಕಿದರು. ಶಿಂಗ್ 237.9 ಸ್ಕೋರ್ ಗಳಿಸಿ ಬೆಳ್ಳಿಯ ಪದಕ ಗೆದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ವಾಫಾ ಅಲಾಲಿ ಈ ವಿಭಾಗದ ಕಂಚಿನ ಪದಕ ಪಡೆದರು.
ಫೈನಲ್‌ಗೆ ಅರ್ಹತೆ ಗಳಿಸಿದ್ದ ಭಾರತದ ಶ್ರೀ ನಿವೇತಾ ಆರನೇ ಸ್ಥಾನಕ್ಕೆ ತೃಪ್ತರಾದರು. ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.
ಅರ್ಹತಾ ಹಂತದಲ್ಲಿ 577 ಸ್ಕೋರ್ ಗಳಿಸಿ ಐದನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ಅಭಿಷೇಕ್, ಅಂತಿಮ ಘಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರಿದರು. ಫೈನಲ್‌ನಲ್ಲಿ ಅವರು 240.7 ಸ್ಕೋರ್ ಗಳಿಸಿದರು.
ದಕ್ಷಿಣ ಕೊರಿಯಾದ ಮೋಸ್ ಕಿಮ್ 240.9 ಸ್ಕೋರ್ ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಸೌರಭ್ ಚೌಧರಿ (198.8 ಸ್ಕೋರ್) ನಾಲ್ಕನೇ ಸ್ಥಾನ ಪಡೆದರು. ಕಂಚಿನ ಪದಕದ ಶೂಟ್ ಆಫ್‌ನಲ್ಲಿ ಅವರು ದಕ್ಷಿಣ ಕೊರಿಯಾದ ತಹೆವಾನ್ ಲೀ ಎದುರು ಸೋತರು. ಭಾರತದ ಮತ್ತೊಬ್ಬ ಶೂಟರ್ ರವೀಂದರ್ 136.3 ಸ್ಕೋರ್ ಗಳಿಸಿ ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.
ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತ ಚಿನ್ನದ ಪದಕ ಪಡೆಯಿತು. ಸೌರಭ್, ಅಭಿಷೇಕ್, ರವೀಂದರ್ ಅವರಿದ್ದ ತಂಡ ಒಟ್ಟು 1742 ಸ್ಕೋರ್ ಗಳಿಸಿ ಈ ಸಾಧನೆ ಮಾಡಿತು. ದಕ್ಷಿಣ ಕೊರಿಯಾ ಈ ವಿಭಾಗದ ಬೆಳ್ಳಿಯ ಪದಕ ಜಯಿಸಿತು.
ಭಾರತದ ಮಹಿಳಾ ಪಿಸ್ತೂಲ್ ತಂಡ ಕಂಚಿನ ಪದಕದ ಸಾಧನೆ ಮಾಡಿತು.ಭಾರತ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ಖಾತೆಯಲ್ಲಿ ಐದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.