ನವದೆಹಲಿ: ಭಾರತದ ಶೂಟರ್ ಸ್ಮಿತ್ ರಮೇಶಭಾಯ್ ಮೊರಾ ಡಿಯಾ, ಇಲ್ಲಿ ನಡೆಯುತ್ತಿರುವ ವಿಶ್ವ ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್ ಷಿಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
ಪದಕದ ನಿರೀಕ್ಷೆ ಮೂಡಿಸಿದ್ದ ಅನುಭವಿ ರೈಫಲ್ ಶೂಟರ್‌ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸಿಫ್ಟ್ ಕೌರ್ ಸಾಮ್ರಾ ಅವರು ಸೋಮವಾರ ನಡೆದ ಸ್ಪರ್ಧೆಯಲ್ಲಿ ನಿರಾಸೆ ಮೂಡಿಸಿದರು. ಒಲಿಂಪಿಯನ್‌ಗಳಾದ ಸಾಮ್ರಾ, ಮಹಿಳೆಯರ 50 ಮೀಟರ್ ರೈಫಲ್‌ನ ತ್ರಿ ಪೊಸಿಷನ್ ಸ್ಪರ್ಧೆ ಯಲ್ಲಿ ನಾಲ್ಕನೇ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ ತೋಮರ್ ಐದನೇ ಸ್ಥಾನ ಗಳಿಸಿದರು.
ಅಷ್ಟೇನೂ ಖ್ಯಾತಿ ಹೊಂದಿರದ ರಮೇಶ್‌ಭಾಯ್ (252.1) ಫೈನಲ್ ಸ್ಪರ್ಧೆಯಲ್ಲಿ ಕೇವಲ 0.1 ಪಾಯಿಂಟ್ ಅಂತರದಲ್ಲಿ ಸೋತು, ಎರಡನೇ ಸ್ಥಾನ ಪಡೆದರು. ಝೆಕ್ ರಿಪಬ್ಲಿಕ್‌ನ ಜಿರಿ ಪ್ರಿವ್ರಾಟ್‌ಸ್ಕಿ (252.2) ಚಿನ್ನದ ಪದಕ ಜಯಿಸಿದರು. ಜಿರಿ ಅವರಿಗೆ ಇದು ಎರಡನೇ ಚಿನ್ನವಾಗಿದೆ. ಅವರು ಭಾನುವಾರ ಪುರುಷರ 50 ಮೀಟರ್ ರೈಫಲ್‌ನಲ್ಲೂ ಚಾಂಪಿಯನ್ ಆಗಿದ್ದರು.
ಭಾರತದ ಪಲಕ್ ಗುಲಿಯಾ ಮತ್ತು ಅಮಿತ್ ಶರ್ಮಾ ಅವರನ್ನು ಒಳಗೊಂಡ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಭಾನುವಾರ ಚಿನ್ನದ ಸಾಧನೆ ಮಾಡಿತ್ತು. ಭಾರತ ಇದುವರೆಗೆ ಒಟ್ಟು ಒಂಬತ್ತು ಪದಕಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.