ಆಟಿಕೆಯ ವಾಹನಗಳೊಂದಿಗೆ ಆಡುತ್ತ ಆನಂದಿಸುವ ವಯಸ್ಸಿನಲ್ಲಿಯೇ ಮೋಟರ್ ರೇಸ್ ಟ್ರ್ಯಾಕ್‌ನಲ್ಲಿ ಛಾಪು ಮೂಡಿಸುವ ಕನಸು ಕಂಡ ಹುಡುಗ ಬೆಂಗಳೂರಿನ ಪೋರ ಶ್ರೇಯಸ್ ಹರೀಶ್.
11ನೇ ವಯಸ್ಸಿನಲ್ಲಿಯೇ ಭಾರತ ಮೋಟರ್‌ಸ್ಪೋರ್ಟ್ಸ್ ಕ್ಲಬ್‌ಗಳ ಫೆಡರೇಷನ್ (ಎಫ್‌ಎಂಎಸ್‌ಸಿಐ) ಮಾನ್ಯತೆ ಪಡೆದ ರೇಸ್‌ಗಳಲ್ಲಿ ಭಾಗವಹಿಸುವ ಪರವಾನಿಗೆ ಗಳಿಸಿದ ಸಾಧನೆ ಸಣ್ಣದಲ್ಲ. ಇತ್ತೀಚೆಗೆ ಕೊಯಿಮತ್ತೂರಿನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಸ್‌ಸಿಐ ರಾಷ್ಟ್ರೀಯ ಮೋಟರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿಯೂ ಶ್ರೇಯಸ್ ಸ್ಪರ್ಧಿಸಿದ್ದ.
ಐದು ವರ್ಷದ ಬಾಲಕನಾಗಿದ್ದಾಗಿನಿಂದಲೇ ಬೈಕ್ ಸವಾರಿಯ ಹವ್ಯಾಸ ಈ ಶ್ರೇಯಸ್‌ನನ್ನು ಆವರಿಸಿತ್ತು. ತಂದೆ ಹರೀಶ್ ಪರಂಧಾಮನ್ ಅವರ ಯಮಹಾ ಬೈಕ್‌ನಲ್ಲಿ ಓಡಾಡುವಾಗಲೇ ಈ ಕ್ರೀಡೆಯ ಮೇಲೆ ಪ್ರೀತಿ ಅಂಕುರಿಸಿತ್ತು.
ಮಗನ ಆಸೆಯನ್ನು ಆತಂಕದಿಂದಲೇ ಸ್ವೀಕರಿಸಿದ ಹರೀಶ್, ನಂತರ ತಾವೇ ಗುರುವಾದರು. ಮಗನಿಗೆ ಪ್ರತಿವಾರ ಕಬ್ಬನ್ ಪಾರ್ಕ್‌ಗೆ ಕರೆದುಕೊಂಡು ಹೋಗಿ ಬೈಕ್ ರೈಡಿಂಗ್ ಹೇಳಿಕೊಟ್ಟರು.
’ಸಣ್ಣ ಬೈಕ್ ಮತ್ತು ಸೈಕಲ್‌ಗಳಲ್ಲಿ ಬ್ಯಾಲೆನ್ಸಿಂಗ್ ಕಲಿತು, ಎಂಟನೇ ವಯಸ್ಸಿಗಾಗಲೇ ಬೈಕ್ ಓಡಿಸುವ ಮಟ್ಟಕ್ಕೆ ಬೆಳೆದ. ಆತನ ಎತ್ತರ ಮತ್ತು ತೂಕಕ್ಕೆ ತಕ್ಕಂತೆ ಕವಾಸಕಿ ಕೆಎಲ್‌ಎಕ್ಸ್110 ಬೈಕ್ ಮಾಡಿಫೈ ಮಾಡಿಸಿ ತರಬೇತಿ ಆರಂಭಿಸಲಾಯಿತು. ಒಂಬತ್ತು ವರ್ಷದವನಿದ್ದಾಗ ಹಾಸನದಲ್ಲಿ ಮೊದಲ ಬಾರಿಗೆ ರೇಸ್‌ನಲ್ಲಿ ಭಾಗವಹಿಸಿದ. ಪ್ರಶಸ್ತಿ ಗೆದ್ದ‘ ಎಂದು ಹರೀಶ್ ಮಗನ ಬಗ್ಗೆ ವಿವರಿಸುತ್ತಾರೆ.
ಹರೀಶ್ ತಮ್ಮ ಮಗನ ಕ್ರೀಡಾಭವಿಷ್ಯವನ್ನು ರೂಪಿಸುವ ಸಲುವಾಗಿ ಫಾರ್ಮಾಸ್ಯುಟಿಕಲ್ ಕಂಪೆನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.
’ಸದ್ಯ ಶ್ರೇಯಸ್‌ಗೆ ಲಭಿಸಿರುವ ಲೈಸೆನ್ಸ್‌ನಲ್ಲಿ ರೇಸಿಂಗ್ ಟ್ರ್ಯಾಕ್ ಮೇಲೆ ಮಾತ್ರ ಬೈಕ್ ಓಡಿಸಬೇಕು. ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಚಾಲನೆ ಮಾಡುವಂತಿಲ್ಲ. ರೇಸ್ ಮತ್ತು ಅಭ್ಯಾಸದ ಸಂದರ್ಭದಲ್ಲಿ ಅವನೊಂದಿಗೆ ಒಬ್ಬರು ಇರಲೇಬೇಕು. ಅದಕ್ಕಾಗಿ ನಾನು ನೌಕರಿ ಬಿಟ್ಟೆ. ಪೂರ್ಣಾವಧಿಯಾಗಿ ಶ್ರೇಯಸ್ ಜೊತೆ ಇರುತ್ತೇನೆ‘ ಎಂದು ಹರೀಶ್ ಹೇಳುತ್ತಾರೆ.
ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್, ಚೆಸ್ ಆಟವನ್ನು ಬಹಳಷ್ಟು ಮಕ್ಕಳು ಆಡಲು ಇಷ್ಟಪಡುತ್ತಾರೆ. ಆದರೆ ಅವೆಲ್ಲವನ್ನೂ ಆಡುವ ಅವಕಾಶವಿದ್ದರೂ ರೇಸ್ ನತ್ತ ಆಕರ್ಷಿತವಾಗಿದ್ದು ಏಕೆ ಎಂಬ ಪ್ರಶ್ನೆಗೆ ಶ್ರೇಯಸ್, ’ಸ್ಪೇನ್‌ನ ಮಾರ್ಕ್ ಮಾರ್ಕೆಜ್ ನನಗೆ ಬಹಳ ಇಷ್ಟ. ಅವರ ರೇಸ್‌ಗಳನ್ನು ತುಂಬಾ ನೋಡುತ್ತೇನೆ. ಅವರು 15ನೇ ವಯಸ್ಸಿನಲ್ಲಿಯೇ ಟ್ರ್ಯಾಕ್‌ಗೆ ಇಳಿದವರು. ನಾನು ಅವರಂತೆಯೇ ಬೆಳೆಯಬೇಕು. ಮೋಟೊ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಬೇಕು ಮತ್ತು ರಾಷ್ಟ್ರಗೀತೆ ಮೊಳಗಬೇಕೆಂಬುದೇ ನನ್ನ ಗುರಿ‘ ಎನ್ನುತ್ತಾನೆ.
ಕೆನ್ಸ್‌ರಿ ಶಾಲೆ ವಿದ್ಯಾರ್ಥಿಯಾಗಿರುವ ಶ್ರೇಯಸ್ ಓದಿನಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದು, ಮುಂಬರಲಿರುವ ರೇಸ್ ಸಿದ್ಧತೆಯೂ ಭರದಿಂದ ನಡೆಸುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.