ಬೆಳಗಾವಿ: ಇಲ್ಲಿನ ಅಂಗವಿಕಲ ಈಜುಪಟುಗಳಾದ ಶ್ರೀಧರ್ ಮಾಳಗಿ ಹಾಗೂ ಮೊಯಿನ್ ಜುನೇದಿ ಅವರು ಇಂಡೋನೇಷ್ಯಾದ ಜಕಾರ್ತದಲ್ಲಿ ಅ. 6ರಿಂದ 13ರವರೆಗೆ ನಡೆಯಲಿರುವ 3ನೇ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀಧರ್ ಅವರು ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಸೆ. 15ರಿಂದ ಆರಂಭವಾಗಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಒಂದೇ ಕೈಯಲ್ಲಿ ಈಜುವ ಅವರು, ‘ಎಸ್–8’ ವಿಭಾಗದ 50 ಮೀ., 100 ಮೀ., 400 ಮೀ. ಫ್ರೀ ಸ್ಟೈಲ್, 100 ಮೀ. ಬ್ಯಾಕ್ ಸ್ಟ್ರೋಕ್, 100 ಮೀ. ಬ್ರೆಸ್ಟ್ ಸ್ಟ್ರೋಕ್, 100 ಮೀ. ಬಟರ್‌ಫ್ಲೈ ಹಾಗೂ 4x100 ಮೀ. ಫ್ರೀ ಸ್ಟೈಲ್ ರಿಲೇ ಹಾಗೂ 4x100 ಮೀ. ಮೆಡ್ಲೆ ರಿಲೇಯಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಗೋ ಸ್ಪೋರ್ಟ್ಸ್ ಪ್ರತಿಷ್ಠಾನ ದತ್ತು ಪಡೆದಿದೆ.
ಮೋಯಿನ್ ‘ಎಸ್–1’ ವಿಭಾಗದಲ್ಲಿ 50 ಮೀ. ಫ್ರೀಸ್ಟೈಲ್ ಹಾಗೂ 50 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇಬ್ಬರೂ ಈಗಾಗಲೇ ಎರಡು ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತರರಾಷ್ಟ್ರೀಯ ಕೂಟದಲ್ಲಿ 4 ಹಾಗೂ ರಾಷ್ಟ್ರಮಟ್ಟದಲ್ಲಿ 56 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಳಗಾವಿ ಈಜುಗಾರರ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಸದಸ್ಯರಾಗಿರುವ ಅವರಿಗೆ ಉಮೇಶ್ ಕಲಘಟಗಿ, ಪ್ರಸಾದ್ ತೆಂಡುಲ್ಕರ್ ಹಾಗೂ ಗುರುಪ್ರಸಾದ್ ತಂಗನಕರ ತರಬೇತಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.