ADVERTISEMENT

ದಾಂಪತ್ಯಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್‌ ತಾರೆಗಳಾದ ಸೈನಾ–ಕಶ್ಯಪ್‌

‘ನನ್ನ ಜೀವನದ ಅತ್ಯುತ್ತಮ ಪಂದ್ಯ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 12:47 IST
Last Updated 14 ಡಿಸೆಂಬರ್ 2018, 12:47 IST
   

ಬೆಂಗಳೂರು:ಭಾರತದ ಬ್ಯಾಡ್ಮಿಂಟನ್‌ನ ದೃವತಾರೆಗಳು ಎಂದೇ ಕರೆಸಿಕೊಳ್ಳುವ ಸೈನಾ ನೆಹ್ವಾಲ್‌ ಹಾಗೂ ಪರುಪಳ್ಳಿ ಕಶ್ಯಪ್‌ ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು.

‘ನನ್ನ ಜೀವನದ ಅತ್ಯುತ್ತಮ ಪಂದ್ಯ’ಎಂದು ಹಾಗೂ #justmarried(ಮದುವೆಯಾಯಿತು) ಹ್ಯಾಷ್‌ಟ್ಯಾಗ್‌ನೊಂದಿಗೆ ತಮ್ಮ ವಿವಾಹದ ಛಾಯಾ ಚಿತ್ರಗಳನ್ನು ಸೈನಾ ನೆಹ್ವಾಲ್‌ ಟ್ವೀಟ್‌ ಮಾಡಿದ್ದಾರೆ.

ವಿವಾಹದ ಧಾರ್ಮಿಕಕಾರ್ಯಕ್ರಮದ ಕೆಲ ಚಿತ್ರಗಳನ್ನುಪರುಪಳ್ಳಿ ಕಶ್ಯಪ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ವಿವಾಹಕ್ಕೆ ಕೇವಲ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಮಾತ್ರ ಕರೆಯಲಾಗಿತ್ತು. ಮುಂದೆನಡೆಯುವ ಆರತಕ್ಷತೆಯಲ್ಲಿ ಕ್ರೀಡಾಪಟುಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಬ್ಯಾಡ್ಮಿಂಟನ್‌ ಅಭಿಮಾನಿಗಳಿಗೆ ಇದು ಸಂಭ್ರಮದ ಕ್ಷಣ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಯಾವುದೇ ವಿಶ್ವಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿಯಿರಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಪುರುಷರ ಸಿಂಗಲ್ಸ್‌ನಲ್ಲಿ ಪರುಪ್ಪಳ್ಳಿ ಕಶ್ಯಪ್‌ ಭಾರತದ ಬ್ಯಾಡ್ಮಿಂಟನ್‌ನ ಭರವಸೆಯ ಸ್ಪರ್ಧಿಗಳು ಎಂದೇ ಗುರುತಿಸಿಕೊಂಡಿದ್ದಾರೆ.

ಪಿ.ವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಳ್ಳುವ ಮೊದಲು ಸೈನಾ, ಭಾರತ ಬ್ಯಾಡ್ಮಿಂಟನ್‌ನ ಮುಖ್ಯ ತಾರೆಯಾಗಿ ಮಿಂಚಿದ್ದರು. ಅವರ ಬ್ರ್ಯಾಂಡ್‌ ಮೌಲ್ಯ ಸಾಕಷ್ಟು ಎತ್ತರಕ್ಕೆ ಏರಿತ್ತು. ಆ ನಂತರ ಅವರು ಗಾಯದ ಸಮಸ್ಯೆಯಿಂದ ಫಾರ್ಮ್‌ ಕಳೆದುಕೊಂಡರು. ಆದರೆ ಅವರು ಬಹಳಷ್ಟು ದಿನ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನವನ್ನು ಕಾಪಾಡಿಕೊಂಡಿದ್ದರು. 2015ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇಲ್ಲಿಯವರೆಗೂ ಅವರು 20 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕೂಡ ಸೇರಿದೆ.

ಪ್ರಸಕ್ತ ಬಿಡಬ್ಲ್ಯುಎಫ್‌ (ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ) ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪರುಪಳ್ಳಿ ಕಶ್ಯಪ್‌ 57ನೇ ಸ್ಥಾನದಲ್ಲಿ ಇದ್ದಾರೆ. ಸೈನಾ, ಹತ್ತನೇ ಸ್ಥಾನದಲ್ಲಿ ಇದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಬ್ಯಾಡ್ಮಿಂಟನ್‌ ಆಟಗಾರ್ತಿ ಎಂಬ ಶ್ರೇಯ ಸೈನಾ ಅವರದ್ದು. ವಿಶ್ವ ಮಟ್ಟದಲ್ಲಿ ಭಾರತದ ಬ್ಯಾಡ್ಮಿಂಟನ್‌ ಕೀರ್ತಿ ಪತಾಕೆ ಹಾರಿಸಿರುವುದರಲ್ಲಿ ಸೈನಾ ಅವರ ಕೊಡುಗೆ ಸಾಕಷ್ಟಿದೆ.

ಈ ಜೋಡಿಗಳು 2005ರಿಂದ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.